ವೀರಾಜಪೇಟೆ, ಅ. ೨೪: ಕಂಡAಗಾಲ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿ ವತಿಯಿಂದ ಡಿಸೆಂಬರ್ ೨೦ ರಿಂದ ೨೬ ರವರೆಗೆ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಕಂಡAಗಾಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಗುವುದು ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ, ಹಾತೂರು ಪಂಚಾಯಿತಿ ವ್ಯಾಪ್ತಿಯ ಬೇರಳಿನಾಡು, ಕುತ್ತುನಾಡು ಹಾಗೂ ಬೊಟ್ಯತ್‌ನಾಡಿನಲ್ಲಿ ಐನ್‌ಮನೆ ಇರುವ ಕೊಡವ ಕುಟುಂಬಗಳಿಗೆ ಮಾತ್ರ ಸೀಮಿತವಾಗಿರುವಂತೆ ಹಾಕಿ ಪಂದ್ಯಾಟವನ್ನು ಆಯೋಜಿಸ ಲಾಗಿದೆ. ಈ ಹಾಕಿ ಪಂದ್ಯಾಟದಲ್ಲಿ ಐದು ಮಂದಿ ಕೊಡವ ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕ್ರೀಡಾ ಕಾರ್ಯದರ್ಶಿ ಮುಲ್ಲೇಂಗಡ ಸುರೇಶ್ ಭೀಮಯ್ಯ ಮಾತನಾಡಿ, ಹಾಕಿ ಪಂದ್ಯಾಟದ ಜೊತೆಗೆ ಮೂರ್ನಾಡಿನಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬಗಳ ಮಹಿಳೆಯರಿಗೆ ಹಗ್ಗಜಗ್ಗಾಟ ಪಂದ್ಯವನ್ನು ಆಯೋಜಿಸಲಾಗಿದೆ. ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿದ ತಂಡಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹಗ್ಗಜಗ್ಗಾಟದಲ್ಲಿ ಭಾಗವಹಿಸಿದ ತಂಡಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ಆಸಕ್ತ ತಂಡಗಳು ಡಿಸೆಂಬರ್ ೧೦ ರೊಳಗೆ ತಮ್ಮ ತಂಡವನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ೯೪೮೧೯೫೧೭೩೨ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಸದಸ್ಯ ಮೂಕಚಂಡ ಪ್ರಸನ್ನ ಸುಬ್ಬಯ್ಯ ಉಪಸ್ಥಿತರಿದ್ದರು.