ಮಡಿಕೇರಿ, ಅ. ೨೩: ಕೊಡಗು ವಿದ್ಯಾಲಯದ ೯ನೇ ತರಗತಿಯ ವಿದ್ಯಾರ್ಥಿನಿ ಹಿತಪ್ರಿಯಾ ಪಿ. ಎಸ್. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ೧೫ ವರ್ಷದೊಳಗಿನ ಮಹಿಳಾ ಮಂಗಳೂರು ವಲಯದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಳೆ.

ಕೆಎಸ್‌ಸಿಎ ಆಯೋಜಿಸಿದ್ದ ಮಂಗಳೂರು ವಲಯದ ಆಯ್ಕೆ ಪ್ರಕ್ರಿಯೆ ಹಾಗೂ ವಲಯಮಟ್ಟದ ತರಬೇತಿ ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿತಪ್ರಿಯಾ, ಮಂಗಳೂರು ವಲಯದ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಳಿಸಿದ್ದಾಳೆ.

ಅಕ್ಟೋಬರ್ ೨೩ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕೆಎಸ್‌ಸಿಎ ರಾಜ್ಯಮಟ್ಟದ ಅಂತರ ವಲಯ ಬಾಲಕಿಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈಕೆ ಮಂಗಳೂರು ವಲಯದ ಪರವಾಗಿ ಕಣಕ್ಕಿಳಿಯಲಿದ್ದಾಳೆ.

ಹಿತಪ್ರಿಯಾ ಮರಗೋಡು ಗ್ರಾಮದ ಕೃಷಿಕ ದಂಪತಿ ಶರತ್ ಮತ್ತು ಸೋನಿಯಾ ಅವರ ಪುತ್ರಿ. ಈಕೆಯನ್ನು ಶಾಲಾ ಶಿಕ್ಷಕಿ ದಿವ್ಯಾ ಎ.ಜೆ. ತರಬೇತುಗೊಳಿಸಿರುತ್ತಾರೆ ಎಂದು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಕೆ. ಎಸ್.ತಿಳಿಸಿದ್ದಾರೆ.