ಸುಂಟಿಕೊಪ್ಪ, ಅ. ೨೩: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆಯುಧಪೂಜಾ ಸಮಾರಂಭ ಗಣಹೋಮ, ದುರ್ಗಾಪೂಜೆಯೊಂದಿಗೆ ಕೊಡಗರಹಳ್ಳಿಯ ಪ್ರಭಾಕರ ಕುದ್ದಣ್ಣಯ್ಯ ನೇತೃತ್ವದಲ್ಲಿ ನಡೆಯಿತು.

ಪ್ರತಿದಿನ ಬಿಡುವು ಇಲ್ಲದೆ ಕೆಲಸ ನಿರ್ವಹಿಸುವ ಪೊಲೀಸರು ಆಯುಧಪೂಜೆಯ ದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆ ಕೈಂಕರ್ಯದಲ್ಲಿ ಪಾಲ್ಗೊಂಡು ಸಂತೋಷಪಟ್ಟರು.

ಆಯುಧಪೂಜೆಯ ಅಂಗವಾಗಿ ಪೊಲೀಸ್ ಠಾಣೆ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿತ್ತು. ಬಣ್ಣ ಬಣ್ಣದ ದೀಪಗಳು ಠಾಣೆಯ ಸುತ್ತಲು ಹಬ್ಬದ ವಾತಾವರಣದಿಂದ ಜನರನ್ನು ಆಕರ್ಷಿಸಿತ್ತು. ಹಲವು ವರ್ಷಗಳಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯುಧಪೂಜೆ ನಡೆದರೂ ಈ ವರ್ಷ ಹಬ್ಬದ ವಾತಾವರಣ ನೋಡುಗರಿಗೆ ವಿಶೇಷವಾಗಿತ್ತು.

ಠಾಣೆಯನ್ನು ನೋಡಲು ಬರುವವರಿಗೆ ಪ್ರಸಾದ ಹಾಗೂ ಲಘು ಉಪಹಾರವನ್ನು ನೀಡಿ ಸತ್ಕರಿಸಿದರು. ಠಾಣೆಯ ಉಪನಿರೀಕ್ಷಕ ಮೋಹನ್‌ರಾಜ್ ಸೇರಿದಂತೆ ಸಿಬ್ಬಂದಿ ವರ್ಗದವರು ಸಂಸಾರ ಸಮೇತ ಪಾಲ್ಗೊಂಡಿದ್ದು ಈ ವರ್ಷದ ವಿಶೇಷವಾಗಿತ್ತು.