ಚೆಯ್ಯಂಡಾಣೆ, ಅ. ೨೩: ಸ್ವಚ್ಛತಾ ಜಾಗೃತಿ ಕಾರ್ಯಕ್ರಮವು ಅತ್ಯಂತ ಪ್ರಮುಖವಾಗಿದ್ದು ಅದರ ಮಹತ್ವ ತಿಳಿದಾಗ ಮಾತ್ರ ಸ್ವಚ್ಛತೆಯಲ್ಲಿ ಪಾಲ್ಗೊಂಡು ಪರಿಸರವನ್ನು ಸಂರಕ್ಷಣೆ ಮಾಡಲು ಸಾಧ್ಯ ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಅವರು ಅಭಿಪ್ರಾಯಪಟ್ಟರು.
ಅವರು ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ, ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕ, ಕಾವೇರಿ ಕಾಲೇಜು ವೀರಾಜಪೇಟೆಯ ಎನ್ಎಸ್ಎಸ್ ಘಟಕ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ಸಂಜೀವಿನಿ ಒಕ್ಕೂಟ ಪಾಲಿಬೆಟ್ಟ ಮತ್ತು ವಿವಿಧ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಜಾಗೃತಿ ಎಂಬುದು ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಅಗತ್ಯವಾಗಿದ್ದು ಎಲ್ಲಾ ಪಂಚಾಯಿತಿಗಳಲ್ಲಿ ಪರಿಸರ ಜಾಗೃತಿ ಮೂಡಿದಾಗ ಮಾತ್ರ ಗ್ರಾಮ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಸ್ವಚ್ಛತಾ ಅಭಿಯಾನ ಜಾಗೃತಿ ಮೂಡಿಸುವಲ್ಲಿ ಎನ್ಎಸ್ಎಸ್ ಘಟಕಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಗಿಡಗಳನ್ನು ನೆಟ್ಟು ಕಸವನ್ನು ನಿಯಂತ್ರಿಸಿ ಗ್ರಾಮಗಳ ಸ್ವಚ್ಛತೆಯನ್ನು ಕಾಪಾಡಿ ಎಂದು ಕರೆ ನೀಡಿದರು.
ಈ ಸಂದರ್ಭ ವೀರಾಜಪೇಟೆಯ ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಅಮ್ಮತ್ತಿಯ ಕಂದಾಯ ಅಧಿಕಾರಿ ಅನಿಲ್, ಕೊಡಗು ಪರಿಸರ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷರಾದ ಶಶಿ ಅಚ್ಚಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲೆ ವೀಣಾ ಕೆ.ಜಿ, ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಶಾಂತಿಭೂಷಣ್, ಕಾವೇರಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸುನಿಲ್, ಎರಡು ಕಾಲೇಜುಗಳ ಉಪನ್ಯಾಸಕರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪಾಲಿಬೆಟ್ಟ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಪಾಲಿಬೆಟ್ಟ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು, ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಸದಸ್ಯರುಗಳು, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು, ಸಮಾಜ ಸೇವಕರುಗಳು, ಗ್ರಾಮಸ್ಥರು ಹಾಗೂ ಎರಡು ಕಾಲೇಜುಗಳ ಎನ್ಎಸ್ಎಸ್ ಸ್ವಯಂಸೇವಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಿಡ ನೆಡುವ ಕಾರ್ಯಕ್ರಮದ ಬಳಿಕ ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು, ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ವರ್ಗದವರು ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದರು.
ರಸ್ತೆ ಎರಡು ಬದಿಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿಗಳನ್ನು ತೆಗೆಯುವುದರ ಮೂಲಕ ಪಂಚಾಯಿತಿ ವಾಹನಕ್ಕೆ ಹಾಕಲಾಯಿತು. ಪಾಲಿಬೆಟ್ಟ ಗ್ರಾಮ ಪಂಚಾಯಿತಿಯಿAದ ಆರಂಭವಾದ ಅಭಿಯಾನವು ಅಮ್ಮತ್ತಿ ರಸ್ತೆ, ಸಿದ್ದಾಪುರ ರಸ್ತೆ, ಗೋಣಿಕೊಪ್ಪಲಿಗೆ ಸಂಪರ್ಕಿಸುವ ರಸ್ತೆಯವರೆಗೆ ಸಾಗಿತು.
ತದನಂತರದಲ್ಲಿ ಪಾಲಿಬೆಟ್ಟ ಗ್ರಾಮದಲ್ಲಿಯೂ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು ಜಾಗೃತಿಯನ್ನು ಮೂಡಿಸಿದರು. ತದನಂತರ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಟದ ಮೈದಾನದಲ್ಲಿ ಎನ್ಎಸ್ಎಸ್ ಸ್ವಯಂ ಸೇವಾ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು. ಈ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಎರಡು ಕಾಲೇಜುಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.