ಗುಡ್ಡೆಹೊಸೂರು, ಅ. ೨೩: ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ್ದರೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ಗ್ರಾಹಕರಿಗೆ ಬಡ್ಡಿದರವನ್ನು ಹೆಚ್ಚಿಸದೆ ಯಥಾಸ್ಥಿತಿ ಕಾಪಾಡಿಕೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಸ್ಪಷ್ಟಪಡಿಸಿದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಆರಂಭವಾದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಮಡಿಕೇರಿ ಇದರ ೨೭ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಕಾರ ರತ್ನ ಪುರಸ್ಕೃತರೂ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇದರ ನಿರ್ದೇಶಕರೂ ಆದ ಗಣಪತಿ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ದೀಪಾವಳಿ ಹಾಗೂ ಹುತ್ತರಿ ಹಬ್ಬದ ನಂತರದ ದಿನಗಳಲ್ಲಿ ಠೇವಣಿಯ ಮೇಲಿನ ಬಡ್ಡಿದರವನ್ನು ೧೫ರಿಂದ೨೦ ಪೈಸೆಗಳಷ್ಟು ಹೆಚ್ಚುವರಿಯಾಗಿ ನೀಡಲು ಬ್ಯಾಂಕ್ ನಿರ್ಧರಿಸಿದೆ ಎಂದು ತಿಳಿಸಿದರು.

ಗುಡ್ಡೆಹೊಸೂರಿನಲ್ಲಿ ಶಾಖೆ ಆರಂಭವಾಗಿರುವುದು ಕೊಡಗಿನ ಜನತೆ ಡಿ.ಸಿ.ಸಿ ಬ್ಯಾಂಕ್ ಮೇಲೆ ಇಟ್ಟಿರುವ ವಿಶ್ವಾಸದ ಪ್ರತೀಕ ಎಂದು ಅವರು ಬಣ್ಣಿಸಿದರು. ಶಾಖೆ ಆರಂಭವಾದ ಮೊದಲ ದಿನವೇ ಗ್ರಾಹಕರು ಕೋಟ್ಯಂತರ ರೂಪಾಯಿ ಠೇವಣಿ ಇರಿಸಿರುವುದು ಬ್ಯಾಂಕಿನ ಮೇಲಿನ ಜನರ ನಂಬಿಕೆಗೆ ಸಾಕ್ಷಿ ಎಂದರು.

ನAಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕುಶಾಲನಗರದ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘಗಳು ತಲಾ ರೂ.೧ ಕೋಟಿಯಂತೆ ರೂ.೩ ಕೋಟಿ ಠೇವಣಿ ಇರಿಸಿವೆ. ಉಳಿದ ಗ್ರಾಹಕರು ರೂ.೬೫ ಲಕ್ಷ ಠೇವಣಿ ಇರಿಸಿದ್ದು, ಒಟ್ಟು ರೂ. ೩.೬೫ ಕೋಟಿ ಠೇವಣಿ ಮೊದಲ ದಿನವೇ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ ಅವರು, ಎಲ್ಲ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ಶಾಖೆಯು ಸುತ್ತಲಿನ ಗ್ರಾಮೀಣ ಜನರು ಹಾಗೂ ಕೃಷಿಕರಿಗೆ ಬ್ಯಾಂಕಿAಗ್ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದು ಗಣಪತಿ ಅಭಿಪ್ರಾಯಪಟ್ಟರು. ಇದೇ ಸಂದರ್ಭ ಬ್ಯಾಂಕ್ ಶಾಖೆಯಲ್ಲಿ ಸ್ಟ್ರಾಂಗ್ ರೂಂ ಮತ್ತು ನಗದು ಕೌಂಟರ್‌ಗೆ ಚಾಲನೆ ನೀಡಿದರು.

ಈ ಸಂದರ್ಭ ಐಪಿಎಂಸಿಎಸ್ ಮತ್ತು ಪ್ಯಾಕ್ಸ್ ಅಧ್ಯಕ್ಷ ಟಿ .ಆರ್. ಶರವಣ ಕುಮಾರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎಂ. ಸಾಗರ್, ಡಿ.ಸಿ.ಸಿ. ಬ್ಯಾಂಕ್ ಸಂಸ್ಥಾಪಕ ಕುಟುಂಬದ ನಾಲ್ಕನೇ ತಲೆಮಾರಿನ ದೇವಯ್ಯ, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎನ್. ಕಾಶಿ ಹಾಗೂ ಪದಾಧಿಕಾರಿಗಳು, ಶಾಖೆಯ ಕಾರ್ಯನಿರ್ವಹಣಾಧಿಕಾರಿ ಬಲರಾಮ್, ಹಿರಿಯ ಸಹಾಯಕ ಜಯಪ್ರಕಾಶ್ ಮತ್ತು ಶಾಖೆಯ ಸಿಬ್ಬಂದಿ, ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಗ್ರಾಹಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.