ಹಾಕತ್ತೂರು, ಅ. ೨೩: ಹಾಕತ್ತೂರು ಗ್ರಾಮ ಪಂಚಾಯಿತಿ, ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟ ಹಾಗೂ ಕೊಡಗು ಜಿಲ್ಲಾ ಬ್ಲಡ್ ಡೋನರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಹಾಕತ್ತೂರಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ. ಕರುಂಬಯ್ಯ ಅವರು ರಕ್ತದಾನವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದೆ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ನೀಡುವ ರಕ್ತವು ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಆರೋಗ್ಯವಂತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಹಾಗೂ ಸಾರ್ವಜನಿಕರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಅತಿಥಿಯಾಗಿ ಮಾತನಾಡಿದ ಹಾಕತ್ತೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗೀತಾಂಜಲಿ ಅವರು, ರಕ್ತದಾನ ಶಿಬಿರಗಳ ಆಯೋಜನೆಯು ಸಮಾಜದಲ್ಲಿ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ಗ್ರಾಮೀಣ ಮಟ್ಟದಲ್ಲಿ ಇಂತಹ ಆರೋಗ್ಯಪರ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಲ್ಲಿ ಜಾಗೃತಿ ಮೂಡುವುದರ ಜೊತೆಗೆ ಅಗತ್ಯವಿರುವ ರೋಗಿಗಳಿಗೆ ನೆರವಾಗಲು ಸಾಧ್ಯವಾಗುತ್ತದೆ. ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸಂಘ-ಸAಸ್ಥೆಗಳು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಹಾಕತ್ತೂರು ಗ್ರಾಮ ಪಂಚಾಯಿತಿ, ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ಹಾಗೂ ಕೊಡಗು ಜಿಲ್ಲಾ ಬ್ಲಡ್ ಡೋನರ್ಸ್ ಸಂಘಟನೆಯ ಸಹಯೋಗದಲ್ಲಿ ನಡೆದ ಈ ಶಿಬಿರವು ರಕ್ತದಾನದ ಮಹತ್ವವನ್ನು ಸಾರುವ ಕಾರ್ಯಕ್ರಮವಾಗಿ ಗಮನ ಸೆಳೆಯಿತು.

ಅಧ್ಯಕ್ಷತೆಯನ್ನು ಕೊಡಗು ಬ್ಲಡ್ ಡೋನರ್ಸ್ನ ಅಧ್ಯಕ್ಷರು ಪಿ. ಪಿ. ಸುಕುಮಾರ್ ಮಾತನಾಡಿ ರಕ್ತದಾನವು ಕೇವಲ ದಾನವಲ್ಲ; ಅದು ಮತ್ತೊಬ್ಬರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸುವ ಮಾನವೀಯ ಕಾರ್ಯವಾಗಿದೆ ಎಂದರು. ವೇದಿಕೆಯಲ್ಲಿ ಕೊಡಗು ಬ್ಲಡ್. ಡೋನರ್ಸ್ ನಿರ್ದೇಶಕರಾದ ಲೀಲಾವತಿ. ಬಿ. ಜೆ. ಹಾಜರಿದ್ದರು

ಕಾರ್ಯಕ್ರಮದಲ್ಲಿ ಪಂಚಾಯಿತಿ ಸಿಬ್ಬಂದಿಗಳಾದ ಸುನೀತಾ. ಸೋವಿಯತ್. ಅಹಮದ್. ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು. ಕೊಡಗು ಬ್ಲಡ್ ಡೋನರ್ಸ್ ಕಾರ್ಯದರ್ಶಿ ಮೈಕಲ್ ವೇಗಸ್. ಉಪಾಧ್ಯಕ್ಷ ಹನೀಫ್ ಸದಸ್ಯ ಬಶೀರ್ ಹಾಗೂ ರಕ್ತದಾನಿಗಳು. ರಕ್ತನಿಧಿ ಕೇಂದ್ರ ಸಿಬ್ಬಂದಿಗಳು ಹಾಜರಿದ್ದರು ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರರಾದ ಸೌಮ್ಯ ಸ್ವಾಗತಿಸಿ ಸಮುದಾಯ ಸಂಪನ್ಮೂಲ ವ್ಯಕ್ತಿ ಹರಿಣಿ ವಂದಿಸಿದರು