ವಿಶೇಷ ವರದಿ : ಈಶಾನ್ವಿ

ವೀರಾಜಪೇಟೆ, ಆ. ೧೩: ಒಂದು ಕಾಲದಲ್ಲಿ ‘ಕೊಡಗು' ಎಂದರೆ ಬರೀ ಸುಂದರ ಪ್ರಕೃತಿಯಷ್ಟೇ ಅಲ್ಲ, ಹಸಿರಿನಿಂದ ಕಂಗೊಳಿಸುತ್ತಿದ್ದ ವಿಶಾಲವಾದ ಭತ್ತದ ಗದ್ದೆಗಳು. ಭತ್ತ ಕೊಡಗಿನ ಮಟ್ಟಿಗೆ ಬರೀ ಆಹಾರ ಧಾನ್ಯವಾಗಿರಲಿಲ್ಲ, ಅದು ಪ್ರತಿಯೊಂದು ಮನೆಯ ಐಶ್ವರ್ಯ ಮತ್ತು ಕೃಷಿಕನ ಕಣ್ಣಿನ ಅಸ್ಮಿತೆಯಾಗಿತ್ತು. ಸಿರಿಧಾನ್ಯವಾಗಿದ್ದ ಭತ್ತದ ಬೆಳೆಗೆ ‘ಸೈಟ್'ಗಳ ಗ್ರಹಚಾರ ವಕ್ಕರಿಸಿ ಗದ್ದೆಗಳು ಈಗ ಅಡಿಕೆ, ಶುಂಠಿ, ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತಿವೆ.

ಕಾಲ ಬದಲಾದಂತೆ ಕೊಡಗಿನ ಆ ಸುವರ್ಣ ಯುಗ ಮೆಲ್ಲನೆ ಇತಿಹಾಸದ ಪುಟ ಸೇರುತ್ತಿದೆ. ಕೊಡಗಿನ ಆಸ್ತಿಯಂತಿದ್ದ ಭತ್ತದ ಗದ್ದೆಗಳು ಇಂದು ಕಣ್ಣೆದುರಲ್ಲೇ ಮಾಯವಾಗುತ್ತಿದ್ದು, ಶೋಚನೀಯ ಸ್ಥಿತಿಗೆ ತಲುಪಿವೆ. ಇದೀಗ ಕೊಡಗಿನಲ್ಲಿ ಕೇವಲ ಬೆರಳೆಣಿಕೆ ರೈತರು ಗದ್ದೆಗಳನ್ನು ಉಳುಮೆ ಮಾಡಲು ಕ್ಷೇತ್ರಕ್ಕಿಳಿದಿದ್ದಾರೆ.

ಹಸಿರು ಗದ್ದೆಗಳಲ್ಲಿ ಈಗ ರಿಯಲ್ ಎಸ್ಟೇಟ್ ದರ್ಬಾರ್!

ಯಾವ ಗದ್ದೆಗಳಲ್ಲಿ ಒಂದೊಮ್ಮೆ ಹಸಿರು ಲಾಸ್ಯವಾಡುತ್ತಿತ್ತೋ, ಬಂಗಾರದ ಬಣ್ಣದ ಭತ್ತದ ತೆನೆಗಳು ತೂಗಾಡುತ್ತಿದ್ದವೋ, ಅಂತಹ ಭೂಮಿಗಳು ಇಂದು ಬರಡು ಜಮೀನುಗಳಾಗಿ, ಸೈಟ್‌ಗಳಾಗಿ ಮತ್ತು ರೆಸಾರ್ಟ್ಗಳಾಗಿ ಮಾರ್ಪಡುತ್ತಿವೆ.

ಕೃಷಿಯಿಂದ ಆದಾಯ ಸಿಗದೆ ಕಂಗಾಲಾದ ಅನೇಕ ರೈತರು ತಮ್ಮ ಸಾಂಪ್ರದಾಯಿಕ ಗದ್ದೆಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದು, ಫಲವತ್ತಾದ ಕೃಷಿ ಭೂಮಿ ಹಿಂದಿನ ವೈಭವ ಕಳೆದುಕೊಳ್ಳುತ್ತದೆ. ಭತ್ತ ಬೆಳೆದು ನಷ್ಟ ಅನುಭವಿಸುವುದಕ್ಕಿಂತ ಲಾಭದಾಯಕ ಬೆಳೆ ಬೆಳೆಯಲು ನಿರ್ಧರಿಸಿದ ರೈತರು ಗದ್ದೆಗಳಿಗೆ ಮಣ್ಣು ತುಂಬಿ ಅಡಿಕೆ, ಶುಂಠಿ, ಬಾಳೆ ಮತ್ತು ಕಾಫಿ ತೋಟಗಳನ್ನಾಗಿ ಪರಿವರ್ತಿಸುತ್ತಿದ್ದಾರೆ.

ಕೃಷಿ ಮಾಯವಾಗಲು ಕಾರಣಗಳು!

ಆರ್ಥಿಕ ನಷ್ಟ ಮತ್ತು ಬೆಂಬಲ ಬೆಲೆ ಇಲ್ಲದೆ ಇದ್ದು, ಬಿತ್ತನೆಯಿಂದ ಹಿಡಿದು ಕೊಯ್ಲು ಮಾಡುವವರೆಗೆ ತಗಲುವ ಅಪಾರ ವೆಚ್ಚಕ್ಕೆ ಹೋಲಿಸಿದರೆ, ಭತ್ತಕ್ಕೆ ಸಿಗುವ ಮಾರುಕಟ್ಟೆ ಬೆಲೆ ತೀರಾ ಕಡಿಮೆ. ತೀವ್ರ ಕಾರ್ಮಿಕರ ಅಭಾವದಿಂದ ಗದ್ದೆ ನಾಟಿ ಮಾಡಲು ಮತ್ತು ಕಳೆ ಕೀಳಲು ಆಳುಗಳು ಸಿಗುತ್ತಿಲ್ಲ. ಯುವ ಪೀಳಿಗೆ ಕೃಷಿಯಿಂದ ವಿಮುಖವಾಗಿ ನಗರಗಳತ್ತ ಮುಖ ಮಾಡಿದೆ. ಅನಾವೃಷ್ಟಿ (ಮಳೆ ಕೊರತೆ) ಹಾಗೂ ಅತಿವೃಷ್ಟಿ(ಪ್ರವಾಹ, ಗುಡ್ಡ ಕುಸಿತ)ಯಿಂದಾಗಿ, ಭತ್ತದ ಬೆಳೆ ಸಂಪೂರ್ಣ ನಶಿಸಿ ಹೋಗುತ್ತಿದೆ. ಕಾಡಾನೆಗಳು, ಕಾಡುಹಂದಿಗಳು ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಸಂಪೂರ್ಣ ನಾಶ ಪಡಿಸುತ್ತಿದ್ದು, ರೈತರ ಶ್ರಮ ನೀರುಪಾಲಾಗುತ್ತಿದೆ. ಸಾಂಪ್ರದಾಯಿಕ ಭತ್ತದ ಕೃಷಿಯನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಸೂಕ್ತ ಸಬ್ಸಿಡಿ ಹಾಗೂ ಪ್ರೋತ್ಸಾಹ ಸಿಗದಿರುವುದು. ಕೃಷಿಯ ಹಿನ್ನಡೆಗೆ ಕಾರಣವಾಗುತ್ತಿವೆ.

ನಶಿಸುತ್ತಿದೆ ಕೊಡಗಿನ ‘ಸಂಸ್ಕೃತಿ'!

"ಭತ್ತದ ಕೃಷಿ ಕೇವಲ ರೈತನ ಆದಾಯದ ಮೂಲವಾಗಿರಲಿಲ್ಲ, ಅದು ಕೊಡಗಿನ ಜಾನಪದ ಹಾಡುಗಳು, ಉಳುಮೆಯ ವೈಭವ ಮತ್ತು ‘ಪುತ್ತರಿ'ಯಂತಹ ಪವಿತ್ರ ಹಬ್ಬಗಳ ಬೇರಾಗಿತ್ತು. ಗದ್ದೆಗಳು ಮಾಯವಾದಂತೆ ಕೊಡಗಿನ ಸಂಸ್ಕöÈತಿ ಮತ್ತು ಸಾಂಪ್ರದಾಯಿಕ ಜೀವವೈವಿಧ್ಯತೆಯೂ ದಿನೇ ದಿನೇ ಕಣ್ಮರೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಎತ್ತುಗಳ ಉಳುಮೆ ಇತಿಹಾಸದ ಪುಟಕ್ಕೆ?

"ಒಂದು ಕಾಲದಲ್ಲಿ ಎತ್ತುಗಳನ್ನು ಕಟ್ಟಿ, ಜಾನಪದ ಹಾಡುಗಳನ್ನು ಹಾಡುತ್ತ ಗದ್ದೆ ಹೂಡುವುದು ಕೊಡಗಿನ ಸಂಸ್ಕöÈತಿಯಾಗಿತ್ತು. ಈಗ ಯಂತ್ರಗಳು ಬಂದರೂ ಆಸಕ್ತಿ ಇಲ್ಲದೆ ಗದ್ದೆಗಳು ಪಾಳು ಬೀಳುತ್ತಿವೆ..

ಸರ್ಕಾರದ ಮಟ್ಟದಲ್ಲಿ ಅಗತ್ಯ

ಕೊಡಗಿನಲ್ಲಿ ಭತ್ತದ ಗದ್ದೆಗಳು ಜಲ ಮರುಪೂರಣ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು. ಗದ್ದೆಗಳನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ಕೊಡಗು ತೀವ್ರ ಕುಡಿಯುವ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ. ಗದ್ದೆಗಳನ್ನು ವಾಣಿಜ್ಯ ಜಮೀನುಗಳನ್ನಾಗಿ ಅಥವಾ ಸೈಟ್‌ಗಳನ್ನಾಗಿ ಪರಿವರ್ತಿಸುವುದಕ್ಕೆ ಕಠಿಣ ಕಾನೂನು ತಡೆಒಡ್ಡಬೇಕು. ಭತ್ತ ಬೆಳೆಯುವ ರೈತರಿಗೆ ವಿಶೇಷ ಪ್ರೋತ್ಸಾಹಧನ ಮತ್ತು ಸೂಕ್ತ ಮಾರುಕಟ್ಟೆ ಬೆಲೆ ಕಲ್ಪಿಸಬೇಕು. ಯಂತ್ರೋಪಕರಣಗಳನ್ನು ಕೃಷಿಕರಿಗೆ ಸುಲಭ ದರದಲ್ಲಿ ಒದಗಿಸಿ, ಭತ್ತದ ಬೇಸಾಯವನ್ನು ಮತ್ತೆ ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿದೆ.

ಕಾವೇರಿ ನದಿ ಮೂಲದಲ್ಲಿಯೇ ಭತ್ತದ ಕೃಷಿ ಕ್ಷೀಣಿಸುತ್ತಿರುವುದು ಪರಿಸರ ಮತ್ತು ಆಹಾರ ಭದ್ರತೆಯ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ಮತ್ತು ಕೃಷಿ ಇಲಾಖೆ ತಕ್ಷಣವೇ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗಿನ ಸಾಂಪ್ರದಾಯಿಕ ಭತ್ತದ ಗದ್ದೆಗಳು ಸಾಂಕೇತಿಕವಾಗಿ ಇತಿಹಾಸದ ಪುಟ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.