ಸಿದ್ದಾಪುರ, ಅ. ೨೨: ಕಾರೊಂದು ಕೆರೆಗೆ ಬಿದ್ದು ಒಂದೇ ಕುಟುಂಬದ ಪುಟ್ಟ ಮಗು ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಿದ್ದಾಪುರ ಸಮೀಪದ ಬಾಡಗ -ಬಾಣಂಗಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಿದ್ದಾಪುರದ ಸಮೀಪದ ಗುಹ್ಯ ಗ್ರಾಮದ ಹೈಸ್ಕೂಲ್ ಪ್ಯೆಸಾರಿ ನಿವಾಸಿಯಾಗಿರುವ ವಿಜೇಶ್ (೩೬) ಪತ್ನಿ ಪಮಿತಾ(೩೪) ಪುತ್ರಿ ಲಿಯಾ(೪) ಮೃತ ದುರ್ದೈವಿಗಳು.
ಸಿದ್ದಾಪುರದ ಬಾಡಗ ಬಾಣಂಗಾಲ ಗ್ರಾಮದ ಖಾಸಗಿ ಸಂಸ್ಥೆಗೆ ಸೇರಿದ ಬಾಡಗ- ಬಾಣಂಗಾಲ ಕಾಫಿ ತೋಟದಲ್ಲಿ ಕಳೆದ ಹಲವು ವರ್ಷಗಳಿಂದ ಫೀಲ್ಡ್ ಆಫೀಸರ್ ಆಗಿ ಕರ್ತವ್ಯ ಮಾಡುತ್ತಿದ್ದ ವಿಜೇಶ್ ಮಂಗಳವಾರ ಸಂಜೆ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಸಿದ್ಧಾಪುರಕ್ಕೆ ಆಗಮಿಸಿ ನಂತರ ರಾತ್ರಿ ಸುಮಾರು ೧೦ ಗಂಟೆ ಸಮಯಕ್ಕೆ ಕಾರಿನಲ್ಲಿ ಹಿಂತಿರುಗಿ ತಾನು ವಾಸ ಮಾಡುತ್ತಿದ್ದ ಕಾಫಿ ತೋಟದ ವಸತಿ ಗ್ರಹಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಕಾಫಿ ತೋಟದೊಳಗೆ ರಸ್ತೆ ಬದಿಯಲ್ಲಿದ್ದ ಕೆರೆಗೆ ಕಾರು ಉರುಳಿದೆ. ಮಂಜಿನಿAದಾಗಿ ರಸ್ತೆ ಸರಿಯಾಗಿ ಕಾಣದೆ ಆಕಸ್ಮಿಕವಾಗಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಮಗುಚಿ ಬಿದ್ದು ನೀರಿನಲ್ಲಿ ಮುಳುಗಿದೆ.
ವಿಜೇಶ್ ಅವರ ಪತ್ನಿ ಪಮಿತಾ, ಮಗಳು ಲಿಯಾ, ಸೇರಿ ಮೂವರು ಕಾರಿನೊಳಗೆ ಸಾವನ್ನಪ್ಪಿದ್ದಾರೆ. ಬುಧವಾರದಂದು ಬೆಳಿಗ್ಗೆ ತೋಟದ ಸಿಬ್ಬಂದಿ ಮತ್ತು ಕಾರ್ಮಿಕರು ಕೆಲಸಕ್ಕೆ ತೆರಳುವ ಸಂದರ್ಭ ಕೆರೆಯಲ್ಲಿ ಬಿದ್ದ ಕಾರನ್ನು ಗಮನಿಸಿ ಹಗ್ಗ ಕಟ್ಟಿ ಎಳೆದು ಪರಿಶೀಲಿಸಿದಾಗ ಮೂವರ ಮೃತದೇಹ ಪತ್ತೆ ಆಗಿದೆ. ಈ ಬಗ್ಗೆ ಸ್ಥಳೀಯರು ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹಗಳನ್ನು ಸಿದ್ಧಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಸಂಬAಧಿಕರಿಗೆ ಹಸ್ತಾಂತರ ಮಾಡಲಾಯಿತು.
ಪ್ರಾಣಾಪಾಯದಿಂದ ಪಾರಾದ ಹಿರಿಯ ಮಗಳು
ವಿಜೇಶ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಸುಖ ಸಂಸಾರದೊAದಿಗೆ ತೋಟದ ವಸತಿ ಗ್ರಹದಲ್ಲಿ ವಾಸ ಮಾಡಿಕೊಂಡಿದ್ದರು. ಆಯುಧ ಪೂಜೆ ರಜೆ ಇದ್ದ ಹಿನ್ನೆಲೆಯಲ್ಲಿ ಮಂಗಳವಾರದAದು ಸಂಜೆ ಪತ್ನಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ವಿಜೇಶ್ ಸಿದ್ದಾಪುರಕ್ಕೆ ಆಗಮಿಸಿದ್ದರು.
ಬಳಿಕ ರಾತ್ರಿ ತಮ್ಮ ವಸತಿಗೃಹಕ್ಕೆ ತೆರುಳುವ ಸಂದರ್ಭದಲ್ಲಿ ತನ್ನ ಹಿರಿಯ ಮಗಳನ್ನು ಸಿದ್ದಾಪುರದಲ್ಲಿ ವಿಜೇಶ್ ತಮ್ಮನ ಬಳಿಗೆ ತಾಯಿ ಕಳಿಸಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ತನ್ನ ಪತ್ನಿ ಹಾಗೂ ಎರಡನೇ ಪುಟ್ಟ ಮಗುವಿನೊಂದಿಗೆ ತೆರಳುತ್ತಿರುವಾಗ ದುರಾದೃಷ್ಟಕರವಾಗಿ ಕಾರು ಕೆರೆಗೆ ಮಗುಚಿ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ದುರಂತದ ಘಟನೆ ಇದಾಗಿದೆ.
ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಮೃತ ವಿಜೇಶ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು ಎಲ್ಲರೊಂದಿಗೆ ಬೆರೆಯುತ್ತಿದ್ದರು. ಇವರ ಮರಣದ ಸುದ್ದಿ ತಿಳಿದು ತೋಟದ ಕಾರ್ಮಿಕರು ಹಾಗೂ ಸ್ಥಳೀಯರು ಕಂಬಿನಿ ಮಿಡಿದರು.