ಪೊನ್ನಂಪೇಟೆ, ಅ.೨೨: ಗೋಣಿಕೊಪ್ಪಲು ನಾಡಹಬ್ಬ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ೩೮ನೇ ವರ್ಷದ ಸ್ತಬ್ಧಚಿತ್ರಗಳ ಮೆರವಣಿಗೆ ವಿವಿಧ ಸಂದೇಶಗಳನ್ನು ನೀಡುವ ಮೂಲಕ ದಸರಾಗೆ ಮೆರುಗು ನೀಡಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಮುಖ್ಯ ರಸ್ತೆಯ ಮೂಲಕ ಉಮಾಮಹೇಶ್ವರಿ ದೇವಸ್ಥಾನದವರೆಗೆ ಸಾಗಿ ಬಂದ ಸ್ತಬ್ಧಚಿತ್ರ ಮೆರವಣಿಗೆಯನ್ನು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು.
ಸಂಘ-ಸAಸ್ಥೆಗಳ ಆಕರ್ಷಕ ಸ್ತಬ್ಧಚಿತ್ರಗಳು
ಭಗತ್ ಸಿಂಗ್ ಯುವಕ ಸಂಘದ ‘ಕರುನಾಡ ಶಿಲ್ಪ ವೈಭವ, ಕಲ್ಲಿನಲ್ಲಿ ಅರಳಿದ ಕಲೆ’ ಎಂಬ ಶೀರ್ಷಿಕೆಯಡಿ ಕರ್ನಾಟಕದ ಶಿಲ್ಪಕಲೆಯ ಶ್ರೀಮಂತ ಪರಂಪರೆಯನ್ನು ಅನಾವರಣಗೊಳಿಸಿತು.
ಸರ್ವಂ ಸಮಿತಿಯ ಏಷ್ಯನ್ ಕ್ರೀಡಾಕೂಟದ ಆಟಗಾರರನ್ನು ಒಳಗೊಂಡ ಸ್ತಬ್ಧಚಿತ್ರದಲ್ಲಿ, ಕ್ರಿಕೆಟ್ ಹಾಗೂ ಸಿನಿಮಾ ತಾರೆಯರಿಗೆ ದೊರೆಯುವ ಪ್ರಚಾರ ಮತ್ತು ಗೌರವವನ್ನು ದೇಶದ ಧ್ವಜವನ್ನು ಎತ್ತಿಹಿಡಿಯುವ ಇತರ ಕ್ರೀಡಾಪಟುಗಳಿಗೂ ನೀಡಬೇಕು, ಎಲ್ಲಾ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು ಎಂಬ ಸಂದೇಶ ಸಾರಿತು.
ಅರುವತ್ತೋಕ್ಲು ಶಾರದಾಂಬ ದಸರಾ ಸಮಿತಿ ಹಾಗೂ ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘದ ‘ಹೆಣ್ಣುಮಕ್ಕಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ’ ಎಂಬ ಸಂದೇಶದೊAದಿಗೆ ಅತ್ಯಾಚಾರ ಮತ್ತು ದೌರ್ಜನ್ಯವನ್ನು ತಡೆಗಟ್ಟಿ, ಮಹಿಳೆಯರ ಬದುಕಿಗೆ ಸುರಕ್ಷತೆ ಹಾಗೂ ಗೌರವ ಕಲ್ಪಿಸಬೇಕು, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂಬ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.
ಪೊನ್ನಂಪೇಟೆ ಗೆಳೆಯರ ಬಳಗ ಸ್ತಬ್ದಚಿತ್ರ ಮಾನವನ ಅತಿಯಾದ ಹಸ್ತಕ್ಷೇಪದಿಂದ ಪರಿಸರದ ಮೇಲೆ ಆಗುವ ಪರಿಣಾಮಗಳು, ಮೋಡ ಬಿತ್ತನೆ ಹಾಗೂ ಪ್ರಕೃತಿಯ ಸಮತೋಲನದ ಕುರಿತು ಜಾಗೃತಿ ಮೂಡಿಸಿತು. ಪರಿಸರ ನಾಶದಿಂದ ಎದುರಾಗುವ ಬರಗಾಲದ ಅಪಾಯವನ್ನು ಮನವರಿಕೆ ಮಾಡುವ ಪ್ರಯತ್ನ ಗಮನ ಸೆಳೆಯಿತು.
ವಿಶ್ವಕರ್ಮ ಸೇವಾ ಸಮಿತಿಯ ‘ವಿಶ್ವಕರ್ಮರ ಕೌಶಲ್ಯ, ನಮ್ಮ ಹೆಮ್ಮೆಯ ಪರಂಪರೆ’ ಎಂಬ ಚಿತ್ರದಲ್ಲಿ ವಿಶ್ವಕರ್ಮರ ಕೈಚಳಕ ನೈಜವಾಗಿ ಮೂಡಿಬಂತು.
ಕೈಕೇರಿ ಪರಿಸರ ಪ್ರೇಮಿ ಸಮಿತಿಯ ಪ್ರಾಚೀನ ಭಾರತದ ಪ್ರಸಿದ್ಧ ವಿದ್ಯಾಕೇಂದ್ರವಾದ ನಳಂದ ವಿಶ್ವವಿದ್ಯಾಲಯದ ಅವನತಿ, ಇತಿಹಾಸ, ಶಿಕ್ಷಣ ಪರಂಪರೆಯನ್ನು ಬಿಂಬಿಸಿತು.
ಲೋಪಮುದ್ರಾ ಮಹಿಳಾ ಸಮಿತಿಯು ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯ, ಪರಾಕ್ರಮದ ಬಗ್ಗೆ ಬೆಳಕು ಚೆಲ್ಲಿತು.
ಇದರೊಂದಿಗೆ ಐಕ್ಯಂ ೧೧೧ ಯುವಸೇನಾ ಚಾರಿಟೆಬಲ್ ಟ್ರಸ್ಟ್ ‘ಒಂದು ಸಣ್ಣ ಸಹಾಯ, ಒಂದು ದೊಡ್ಡ ಬದಲಾವಣೆ’ ಹಾಗೂ ‘ಸಮಾಜ ಸೇವೆಯೇ ದೇಶ ಸೇವೆ’ ಎಂಬ ಬ್ಯಾನರ್ ಹಿಡಿದು ಸಮಾಜಮುಖಿ ಸಂದೇಶ ಸಾರಿತು. ಓಂಕಾರ ಭಜನಾ ಮಂಡಳಿ ಮದ್ವ ಇವರ ಭಜನಾ ಕುಣಿತ ಗಮನ ಸೆಳೆಯಿತು. ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಬಾಲ್ಯವಿವಾಹ ತಡೆ, ಕಿಶೋರಾವಸ್ಥೆಯ ಗರ್ಭಧಾರಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಶಾಲಾ ಶಿಕ್ಷಣ ಇಲಾಖೆ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಎಂಬ ಸಂದೇಶದೊAದಿಗೆ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವ ಸಾರಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೃಹಲಕ್ಷ್ಮಿ ಯೋಜನೆಯಡಿ ರೂ.೨,೦೦೦ ಆರ್ಥಿಕ ನೆರವು, ಪೋಷಣ್ ಅಭಿಯಾನದ ಬಗ್ಗೆ ಮಾಹಿತಿ ನೀಡಿತು. ವೀರಾಜಪೇಟೆ ತಾಲೂಕು ಪಂಚಾಯಿತಿಯ ವಿಬಿಜಿ ರಾಮ್ ಜಿ ಮಾಹಿತಿ ರಥದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಲಾಯಿತು. ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ತಮ್ಮ ಯೋಜನೆಗಳನ್ನು ಪರಿಚಯಿಸಿದವು. ತಾಲೂಕಿನ ೩೪ ಇಲಾಖೆಗಳಲ್ಲಿ ಕೇವಲ ೭ ಇಲಾಖೆಗಳು ಮಾತ್ರ ಭಾಗವಹಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.
ಸ್ತಬ್ಧಚಿತ್ರ ಉದ್ಘಾಟನೆ
ಸಂಘ-ಸAಸ್ಥೆಗಳ ೭ ಹಾಗೂ ಸರ್ಕಾರಿ ಇಲಾಖೆಯ ೭ ಸೇರಿದಂತೆ ಒಟ್ಟು ೧೪ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಪರಿಸರವಾದಿ ಕರ್ನಲ್ ಚೆಪ್ಪುಡಿರ ಮುತ್ತಣ್ಣ, ನಾಡಹಬ್ಬ ದಸರಾ ಸಮಿತಿ ಅಧ್ಯಕ್ಷ ಕಂಜಿತAಡ ಪ್ರವೀಣ್, ಉಪಾಧ್ಯಕ್ಷ ಸುನಿಲ್ ಲಿಬರ್ಟಿ, ಕಾರ್ಯದರ್ಶಿ ಪ್ರಭಾಕರ್ ನೆಲ್ಲಿತ್ತಾಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಹುಮಾನ ಘೋಷಣೆಯಲ್ಲಿ ಗೊಂದಲ
ತೀರ್ಪುಗಾರಿಕೆಯಲ್ಲಿ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತವಾಯಿತು. ಅಂತಿಮವಾಗಿ ಭಗತ್ ಸಿಂಗ್ ಯುವಕ ಸಂಘ ಹಾಗೂ ಶ್ರೀ ಶಾರದಾಂಬ ದಸರಾ ಸಮಿತಿಗೆ ಜಂಟಿಯಾಗಿ ಪ್ರಥಮ, ಸರ್ವಂ ಸಮಿತಿಗೆ ತೃತೀಯ, ಪೊನ್ನಂಪೇಟೆ ಗೆಳೆಯರ ಬಳಗಕ್ಕೆ ನಾಲ್ಕನೇ ಬಹುಮಾನ ಘೋಷಣೆ ಮಾಡಲಾಯಿತು. ಇದರಿಂದ ಆಕ್ರೋಶಗೊಂಡ ಸರ್ವಂ ಸಮಿತಿ ಹಾಗೂ ಇತರ ಸಮಿತಿಗಳು ಬಹುಮಾನ ಹಾಗೂ ಸ್ಮರಣಿಕೆ ನಿರಾಕರಿಸಿ ನಾಡಹಬ್ಬ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ತಬ್ಧಚಿತ್ರಗಳ ಮೆರವಣಿಗೆಯ ಜೊತೆ ಸ್ಕೇಟಿಂಗ್ ಮಾಡುತ್ತಾ ಪಟ್ಟಣದಾದ್ಯಂತ ಸಂಚರಿಸಿ ಗಮನ ಸೆಳೆದ ಪೊನ್ನಂಪೇಟೆಯ ಬಾಲಕ ನಿಹಾನ್ಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಚಿತ್ರ, ವರದಿ : ಚನ್ನನಾಯಕ