ಮಡಿಕೇರಿ,ಅ.೨೨; ಕೊಡಗು ಜಿಲ್ಲೆಗೆ ಏನಾದರೂ ಹೊಸ ಯೋಜನೆ ರೂಪಿಸಬೇಕೆಂಬ ಚಿಂತನೆ ತನ್ನಲ್ಲಿದೆ ಎಂದು ಹಿರಿಯ ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ ಹೇಳಿದರು.
ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ವಿಜಯದಶಮಿ ಅಂಗವಾಗಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಹಿಂದೆ ಇದೇ ವೇದಿಕೆಯಲ್ಲಿ ಸಾವಿರಾರು ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಏನಾದರೂ ಹೊಸ ಯೋಜನೆ ರೂಪಿಸಬೇಕೆಂಬ ಚಿಂತನೆ ಬಹಳ ಹಿಂದಿನಿAದಲೇ ಇದೆ, ಅಭಿವೃದ್ಧಿಗೆ ಸಹಕಾರ ನೀಡುವದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಗರಸಭಾ ಮಾಜಿ ಅಧ್ಯಕ್ಷರಾಗಿದ್ದ ಪಿ.ಟಿ.ಉಣ್ಣಿಕೃಷ್ಣ ಮಾತನಾಡಿ; ಗಾಂಧಿ ಮೈದಾನದ ವೇದಿಕೆಯ ಬಳಿ ಇರುವ ದಿಬ್ಬವನ್ನು ಸಮತಟ್ಟುಗೊಳಿಸಿದಲ್ಲಿ ರಾಜಾಸೀಟ್ಗೆ ಆಗಮಿಸುವ ಪ್ರವಾಸಿಗರ ವಾಹನ ನಿಲುಗಡೆಗೆ ಅವಕಾಶವಾಗುವದಲ್ಲದೆ, ದಸರಾ ಕಾರ್ಯಕ್ರಮ ಮಾಡಲು ಇನ್ನೂ ಹೆಚ್ಚಿಗೆ ಸ್ಥಳಾವಕಾಶ ಸಿಗಲಿದೆ. ಈ ಬಗ್ಗೆ ಚಂದ್ರಮೌಳಿ ಅವರು ಆಸಕ್ತಿ ವಹಿಸುವಂತೆ ಮನವಿ ಮಾಡಿದರು.
ಹಿರಿಯರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರು, ಸಮಾಜಸೇವಕರಾದ ಡಾ. ಮನೋಹರ್ ಜಿ.ಪಾಟ್ಕರ್, ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ, ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ, ಯೋಗಭಾರತಿಯ ಯೋಗಗುರು ಕೆ.ಕೆ. ಮಹೇಶ್ಕುಮಾರ್ ಅವರುಗಳನ್ನು ದಸರಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಸಬಿತಾ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಮಾಜಿ ಕಾರ್ಯಾಧ್ಯಕ್ಷ ಸತೀಶ್ ಪೈ ಇದ್ದರು.