ಮಡಿಕೇರಿ, ಅ.೨೨; ಸಂಜೆಯಿAದಲೇ ತಡರಾತ್ರಿವರೆಗೂ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕ ಸಮೂಹ ಹಿನ್ನೆಲೆ ಗಾಯಕರುಗಳಾದ ಅನನ್ಯ ಭಟ್ ಹಾಗೂ ವಾಸುಕಿ ವೈಭವ್ ಅವರುಗಳ ಗಾನ ಮಾಧುರ್ಯಕ್ಕೆ ತಲೆದೂಗಿ ಸಂಭ್ರಮಿಸಿದರು.
ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯುಧಾ ಪೂಜಾ ಅಂಗವಾಗಿ ತಾ.೨೦ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕರುಗಳಾದ ಅನನ್ಯ ಭಟ್ ತನ್ನ ಸ್ವರ ಮಾಧುರ್ಯದಿಂದ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ನಂತರದಲ್ಲಿ ಕಾರ್ಯಕ್ರಮ ನೀಡಿದ ವಾಸುಕಿ ವೈಭವ್ ಕೂಡ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಒಂದಾದ ಮೇಲೆ ಒಂದರAತೆ ಹರಿದು ಬಂದ ಈರ್ವರು ಗಾಯಕರುಗಳ ಹಾಡುಗಳಿಗೆ ಶಿಳ್ಳೆ, ಚಪ್ಪಾಳೆಗಳೊಂದಿಗೆ ಹೆಜ್ಜೆ ಹಾಕಿದ ಪ್ರೇಕ್ಷಕರು ತಡರಾತ್ರಿವರೆಗೂ ಸಂಭ್ರಮಿಸಿದರು.
ಗಮನ ಸೆಳೆದ ಸಾಂಸ್ಕೃತಿಕ ವೈಭವ
ಇದರೊಂದಿಗೆ ವೇದಿಕೆಯಲ್ಲಿ ಕೊಡಗು ಜಿಲ್ಲಾ ಬಂಟರ ಮಹಿಳಾ ಘಟಕದ ವತಿಯಿಂದ ಬಂಟರ ಸಂಸ್ಕೃತಿ ಹಾಗೂ ವಿವಾಹ ಸಂಪ್ರದಾಯದ ರೂಪಕ ಆಕರ್ಷಕವಾಗಿತ್ತು. ಬೆಂಗಳೂರಿನ ಟೀಂ ಪೊನಿಧ್ವನಿ ತಂಡ ಅರೆಭಾಷೆ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮಾಡಿದರೆ, ಮಂಗಳೂರಿನ ಗಾನ ನೃತ್ಯ ಅಕಾಡೆಮಿಯವರಿಂದ ನೃತ್ಯ ಪ್ರದರ್ಶನ, ಸುಂಟಿಕೊಪ್ಪದ ಗ್ಯಾಂಗ್ ಡ್ಯಾನ್ಸ್ ಅಕಾಡೆಮಿಯವರಿಂದ ನೃತ್ಯ ಪ್ರದರ್ಶನ ಮೂಡಿ ಬಂದರೆ, ನಾಪೋಕ್ಲುವಿನ ಹಿಂದೂ ಮಲಯಾಳಿ ಸಂಘದವರು ನವದುರ್ಗೆಯರಿಂದ ಮಹಿಷಾಸುರನ ವಧೆಯನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು.
ವಿಶೇಷವಾಗಿ ಪ್ರೇಮದ ಊರಲಿ ಚಿತ್ರದ ಟೈಟಲ್ ಗೀತೆಯನ್ನು ಹಾಡಿದ ಕಾರ್ಕಳದ ಜೆಇಎಂ ಎಸ್ ಶಾಲೆಯ ಶಿಕ್ಷಕಿ ವಂದನಾ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಗೀತೆಯನ್ನು ಹಾಡಿ ಗಮನ ಸೆಳೆದರು.
ವಾಹನ ಅಲಂಕಾರ ಸ್ಪರ್ಧೆ
ಇದೇ ಸಂದರ್ಭದಲ್ಲಿ ದಸರಾ ಅಲಂಕಾರ ಸಮಿತಿ ವತಿಯಿಂದ ವಾಹನ, ಕಟ್ಟಡ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಲಂಕೃತ ವಾಹಗಳು ಗಾಂಧಿ ಮೈದಾನದಲ್ಲಿ ಸಮಾಗಮಗೊಂಡಿದ್ದವು. ಆಕರ್ಷಕವಾಗಿದ್ದ ವಾಹನಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.