ಸುಂಟಿಕೊಪ್ಪ, ಅ. ೨೨: ಹೆರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾಗಿ ಮೃತಪಟ್ಟ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಮುಳುಗು ತಜ್ಞರ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.

೭ನೇ ಹೊಸಕೋಟೆಯ ನಿವಾಸಿ ರಜಾಕ್ ಅವರ ಪುತ್ರ ರಮೀಜ್ (೨೦) ಮೃತ ಯುವಕ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರಮೀಜ್ ರಜೆಯ ನಿಮಿತ್ತ ಮನೆಗೆ ಬಂದಿದ್ದ. ಬುಧವಾರ ಸಂಜೆ ರಮೀಜ್ ತನ್ನ ಸ್ನೇಹಿತರಾದ ಶಹದ್, ನೌಫಲ್, ಅಜೀಮ್ ಹಾಗೂ ಸಾಹಿದ್ ಅವರೊಂದಿಗೆ ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ಈಜಲು ತೆರಳಿದ್ದ. ಈ ವೇಳೆ ನೀರಿನಲ್ಲಿ ಸಿಲುಕಿದ ರಮೀಜ್ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕತ್ತಲಾದ ಹಿನ್ನೆಲೆಯಲ್ಲಿ ರಾತ್ರಿ ಮೃತದೇಹ ಪತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ರಾತ್ರಿ ಸ್ಥಳಕ್ಕೆ ಆಗಮಿಸಿದರು. ಗುರುವಾರ ಬೆಳಗ್ಗೆ ಹಿನ್ನೀರಿನಲ್ಲಿ ಕಾರ್ಯಾಚರಣೆ ನಡೆಸಿ ರಮೀಜ್ ಅವರ ಮೃತದೇಹವನ್ನು ಪತ್ತೆಹಚ್ಚಿ ನೀರಿನಿಂದ ಮೇಲಕ್ಕೆ ತಂದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.