ಗೋಣಿಕೊಪ್ಪಲು, ಅ. ೨೨: ಅದ್ದೂರಿ ಶೋಭಾಯಾತ್ರೆಯೊಂದಿಗೆ ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲಿ ನಾಡಹಬ್ಬ ದಸರಾ ಸಂಪನ್ನಗೊAಡಿತು.

ಜನಸ್ತೋಮದ ಸಂಭ್ರಮ, ಪೌರಾಣಿಕ ಹಿನ್ನೆಲೆಯ ಸೃಜನಶೀಲ ಮಂಟಪಗಳ ಅದ್ದೂರಿ ಮೆರವಣಿಗೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಂಟಪಗಳೊAದಿಗೆ ಸಾಗಿದ ಡಿಜೆ ಸೌಂಡ್ಸ್ ಹಾಗೂ ವಾಲಗಕ್ಕೆ ಯುವಕ-ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು ಶ್ರೀ ಕಾವೇರಿ ದಸರಾ ಸಮಿತಿಯ ೪೮ನೇ ವರ್ಷದ ದಸರಾ ಜನೋತ್ಸವವು ಯಶಸ್ವಿಯಾಗಿ ನಡೆಯಿತು.

ದಸರಾ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ೬೦೦ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಜನದಟ್ಟಣೆ ಮತ್ತು ವಾಹನ ಸಂಚಾರವನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಶೋಭಾಯಾತ್ರೆ ಮುಕ್ತಾಯದ ಬಳಿಕ ಬೆಳಗ್ಗೆ ೮.೩೦ರ ನಂತರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಬಾರಿ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ದಸರಾ ವೀಕ್ಷಣೆಗೆ ಆಗಮಿಸಿದ್ದರು

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆಕರ್ಷಕ ಮಂಟಪಗಳನ್ನು ನಿರ್ಮಿಸಿದ್ದರೂ, ಸಮಯಪಾಲನೆಯ ವಿಷಯದಲ್ಲಿ ಕೆಲವು ಮಂಟಪಗಳು ಎಡವಿದವು. ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಂಟಪಗಳ ಪ್ರದರ್ಶನ ವೀಕ್ಷಿಸಲು ನಿಗದಿಪಡಿಸಿದ್ದ ಅವಧಿ ವಿಸ್ತರಣೆಯಾಯಿತು. ಬೆಳಗ್ಗೆ ೭ರಿಂದ ೮ ಗಂಟೆಯವರೆಗೂ ಪ್ರದರ್ಶನ ಮುಂದುವರಿಯಿತು. ಸಾವಿರಾರು ಜನರು ಸ್ಥಳದಲ್ಲಿ ಕಾದು ಮಂಟಪಗಳ ವೈಭವವನ್ನು ವೀಕ್ಷಿಸಿದರು.

ಮಂಟಪಗಳು ತಮ್ಮ ತಮ್ಮ ಸ್ಥಳಗಳಿಂದ ಹೊರಟು ಉಮಾಮಹೇಶ್ವರಿ ದೇವಾಲಯದ ಬಳಿ ತಲುಪುವಷ್ಟರಲ್ಲಿ ರಾತ್ರಿ ೧೦ ಗಂಟೆ ಮೀರಿತ್ತು. ಬಹುತೇಕ ಮಂಟಪಗಳಲ್ಲಿ ಡಿಜೆ ಸೌಂಡ್ ವ್ಯವಸ್ಥೆ ಅಳವಡಿಸಲಾಗಿತ್ತು. ರಾತ್ರಿ ೧೦ ಗಂಟೆಯ ನಂತರ ಡಿಜೆ ಬಳಸಬಾರದೆಂದು ಪೊಲೀಸರು ಸೂಚನೆ ನೀಡಿದ್ದರು. ಅದರಂತೆ ದಶಮಂಟಪಗಳ ಆಯೋಜಕರು ಪೊಲೀಸರ ಸೂಚನೆಯನ್ನು ಪಾಲಿಸಿ ಡಿಜೆ ಸ್ಥಗಿತಗೊಳಿಸಿದರು.

ಮಳೆಯಿಂದ ದಸರೆ ಸಂಭ್ರಮ ಮಂಕಾಗುವ ಆತಂಕ ಸೃಷ್ಟಿಯಾಗಿತ್ತು. ಆದರೆ, ಮಳೆರಾಯ ಕೃಪೆ ತೋರಿದ ಪರಿಣಾಮ ಶೋಭಾಯಾತ್ರೆ ಸುಗಮವಾಗಿ ಸಾಗುವಂತಾಯಿತು. ವ್ಯಾಪಾರಕ್ಕಾಗಿ ದೂರದ ಊರಿನಿಂದ ಸಾಕಷ್ಟು ವ್ಯಾಪಾರಿಗಳು ಆಗಮಿಸಿ ತಮ್ಮ ವ್ಯಾಪಾರವನ್ನು ಭರ್ಜರಿಯಾಗಿ ನಡೆಸಿದರು.