ಕೂಡಿಗೆ, ಅ. ೨೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ೧೨೦ ಎಕರೆಗಳಷ್ಟು ಪ್ರದೇಶದಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಮೇಕೆ ಹಾಲು ಉತ್ಪಾದಕ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ರೂಪಿಸಲಾದ ರಾಜ್ಯ ಸರ್ಕಾರದ ಹೊಸ ಯೋಜನೆ ಕಳೆದ ೧೫ ವರ್ಷಗಳ ಹಿಂದೆ ಆರಂಭವಾಗಿ ಪಶುಪಾಲನಾ ಇಲಾಖೆಯ ಮೂಲಕ ಒಂದು ಕೋಟಿ ರೂ ವೆಚ್ಚದ ಮೇಕೆ ಹಾಲು ಉತ್ಪಾದಕ ಕೇಂದ್ರ ಮತ್ತು ಕುರಿಗಳ ಸಾಕಾಣಿಕೆ ಕಟ್ಟಡ ಕಟ್ಟಲ್ಪಟ್ಟಿದೆಯಾದರೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಈ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಕುಶಾಲನಗರ ತಾಲೂಕು ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಬAಧ ಕಂದಾಯ ಇಲಾಖೆಯ ವತಿಯಿಂದ ಪ್ರಕ್ರಿಯೆಗಳು ನಡೆಯುತ್ತಿದ್ದು, ಗ್ರಾಮಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಹೊಸ ಯೋಜನೆಯನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ೫೦ ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ನಿವೇಶನದ ರೂಪುರೇಷೆಗಳ ಕಾರ್ಯ ಆಯಾ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ೧೨೦ ಎಕರೆ ಪ್ರದೇಶದಲ್ಲಿ ಇದೀಗ ೭೦ ಎಕರೆಗಳಷ್ಟು ಪ್ರದೇಶದಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಗ್ರಾಮಸ್ಥರ ವಿರೋಧ : ರೈತರ ಅಭಿವೃದ್ಧಿ ಉದ್ದೇಶದಿಂದ ಸ್ಥಾಪಿತವಾಗಿದ್ದ ಮೇಕೆ ಹಾಲು ಉತ್ಪಾದಕರ ಘಟಕದ ಜಾಗವನ್ನು ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡುವ ಬದಲು, ಮೇಕೆ ಘಟಕದ ಅಭಿವೃದ್ಧಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಸಾವಿರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ರೈತರಿಗೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಬೆಳವಣಿಗೆಗೆ ಮೇಕೆ ಹಾಲು ಘಟಕ ಪೂರಕವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾ ಕುರಿ ಮತ್ತು ಉಣ್ಣೆ ಸಹಕಾರ ನಿಯಮಿತ ಸಂಘದ ಅಧ್ಯಕ್ಷ ಡಿ.ಆರ್ ಪ್ರಭಾಕರ್, ಉದ್ದೇಶಿತ ಮೇಕೆ ಹಾಲು ಘಟಕವನ್ನು ತೆರೆಯುವ ಮೂಲಕ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

-ಕೆ. ಕೆ. ನಾಗರಾಜಶೆಟ್ಟಿ.