ಮಡಿಕೇರಿ, ಅ.೨೦: ದಸರಾ ಸಂಭ್ರಮದಲ್ಲಿದ್ದ ಮಡಿಕೇರಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡ ಜನರಲ್ಲಿ ಆತಂಕ ಮೂಡಿಸಿತು.

ದಸರಾ ಹಿನ್ನೆಲೆಯಲ್ಲಿ ನಗರದ ಅಂಚೆ ಕಚೇರಿ ಮುಂಭಾಗದ ಹಾಪ್‌ಕಾಮ್ಸ್ ಸಮೀಪ ಅಳವಡಿಸಲಾಗಿದ್ದ ಜನರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿಕೊಂಡಿದ್ದು, ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಬೆಂಕಿಯ ತೀವ್ರತೆಗೆ ಜನರೇಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ದಸರಾ ವೇದಿಕೆ ಹಾಗೂ ದೀಪಾಲಂಕಾರದ ಗುತ್ತಿಗೆ ಪಡೆದವರು ಈ ಜನರೇಟರ್ ಅಳವಡಿಸಿದ್ದರು ಎಂದು ತಿಳಿದುಬಂದಿದೆ. ಅಗ್ನಿ ಅವಘಡದಿಂದ ಸಮೀಪದಲ್ಲಿದ್ದ ಬೀದಿಬದಿ ವ್ಯಾಪಾರಿಗಳು ಆತಂಕಕ್ಕೊಳಗಾದರು. ಘಟನೆಯಿಂದಾಗಿ ಆ ಪ್ರದೇಶದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.