ವಿಶೇಷ ವರದಿ : ಈಶಾನ್ವಿ
ವೀರಾಜಪೇಟೆ, ಅ. ೨೦: ಪ್ರತಿಷ್ಠಿತ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಮಹೋತ್ಸವದ ಶೋಭಾಯಾತ್ರೆಗಳಲ್ಲಿ ಡಿಜೆ ಧ್ವನಿವರ್ಧಕಗಳ ಬಳಕೆಗೆ ಸಂಬAಧಿಸಿದAತೆ ಉಂಟಾಗಿರುವ ಕಾನೂನು ಹಾಗೂ ಸಾರ್ವಜನಿಕ ಚರ್ಚೆಗಳ ಹಾದಿಯಲ್ಲಿ, ರಾಜ್ಯ ಹೈಕೋರ್ಟ್ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ಎತ್ತಿಹಿಡಿದಿದ್ದು, ಸಾರ್ವಜನಿಕ ಮೆರವಣಿಗೆಗಳಲ್ಲಿ ಡಿಜೆ ಬಳಕೆಗೆ ಅನುಮತಿ ನಿರಾಕರಿಸಲಾಗಿದೆ.
ಪ್ರಕರಣದ ಹಿನ್ನೆಲೆ
ವೀರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಗೌರಿ-ಗಣೇಶ ಉತ್ಸವದ ಸಂದರ್ಭದಲ್ಲಿ ಡಿಜೆ ವಾಹನ ಮೆರವಣಿಗೆಯಲ್ಲಾದ ದುರ್ಘಟನೆ ಹಾಗೂ ವ್ಯಕ್ತಿಯೊಬ್ಬರ ಸಾವು, ತೀವ್ರ ಶಬ್ದ ಮಾಲಿನ್ಯ ಮತ್ತು ಕಾನೂನು ಉಲ್ಲಂಘನೆ ಪ್ರಕರಣಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಡಿಜೆ ಬಳಕೆಯ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧದ ವಿರುದ್ಧ ಮಡಿಕೇರಿಯ ದಶಮಂಟಪ ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ ದಸರಾ ಸಮಿತಿಯ ಪರವಾಗಿ ಶೋಭಾಯಾತ್ರೆ ವೇಳೆ ಡಿಜೆಗೆ ಅವಕಾಶ ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠವು, ಅರ್ಜಿದಾರರ ಮನವಿಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಅಕ್ಟೋಬರ್ ೧೫ರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಅಲ್ಲದೆ, ಡಿಜೆ ಬಳಕೆಯನ್ನು ವಿರೋಧಿಸುವವರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿತ್ತು.
ಜಿಲ್ಲಾಧಿಕಾರಿಗಳ ಆದೇಶ ಹಾಗೂ ವಾದ-ಪ್ರತಿವಾದ
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ, ಹೈಕೋರ್ಟ್ ವಕೀಲರಾದ ಎನ್.ಪಿ. ಅಮೃತೇಶ್ ಹಾಗೂ ವಿರಾಜಪೇಟೆಯ ಸಾಮಾಜಿಕ ಕಾರ್ಯಕರ್ತ ಮಾಳೇಟಿರ ಕಾಳಯ್ಯ ಹಾಗೂ ಇತರರು ಡಿಜೆ ಬಳಕೆಯಿಂದಾಗುವ ದುಷ್ಪರಿಣಾಮಗಳು ಮತ್ತು ಶಬ್ದ ಮಾಲಿನ್ಯದ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಿದ್ದರು.
ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು ಸುಪ್ರೀಂಕೋರ್ಟ್ನ ೨೦೦೫ರ ತೀರ್ಪಿನ ಅನ್ವಯ ಸಾರ್ವಜನಿಕ ಮೆರವಣಿಗೆಗಳಲ್ಲಿ ಡಿಜೆ ಬಳಸಲು ಅವಕಾಶವಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದರು. ಕೊಡಗು ಜಿಲ್ಲಾಧಿಕಾರಿಗಳು, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ (ಖಿhe ಓoise Poಟಟuಣioಟಿ ಖuಟes, ೨೦೦೦) ಅಡಿಯಲ್ಲಿ ರಾತ್ರಿ ೧೦ ಗಂಟೆಯಿAದ ಬೆಳಿಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೆ ಸ್ಪಷ್ಟ ನಿಷೇಧವಿರುವುದನ್ನು ಉಲ್ಲೇಖಿಸಿ, ದಸರಾ ಸಮಿತಿಯ ಪರವಾಗಿ ಸಲ್ಲಿಕೆಯಾಗಿದ್ದ ಡಿಜೆ ಅನುಮತಿ ಕೋರಿಕೆಯನ್ನು ಅಕ್ಟೋಬರ್ ೧೫ರಂದು ಅಧಿಕೃತವಾಗಿ ತಿರಸ್ಕರಿಸಿದರು.
ಹೈಕೋರ್ಟ್ನ ಇತ್ತೀಚಿನ ಮಧ್ಯಂತರ ಆದೇಶ
ಜಿಲ್ಲಾಧಿಕಾರಿಗಳ ಈ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ದಸರಾ ಸಮಿತಿಯವರು ಮತ್ತೊಂದು ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಪೀಠದ ಮುಂದೆ ದಾಖಲಿಸಿದರು. ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು ಡಿಜೆಗೆ ಅವಕಾಶ ಕಲ್ಪಿಸಬೇಕೆಂದು ವಾದ ಮಂಡಿಸಿದರೆ, ಪ್ರತಿವಾದಿಗಳ ಪರ ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಉಲ್ಲೇಖಿಸಿ ಡಿಜೆ ಬಳಕೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಬಲವಾಗಿ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರು, “ಜಿಲ್ಲಾಧಿಕಾರಿಗಳ ಆದೇಶದಲ್ಲಿ ಯಾವುದೇ ನ್ಯೂನ್ಯತೆ ಇಲ್ಲ” ಎಂದು ಸ್ಪಷ್ಟಪಡಿಸಿ, ಡಿಜೆಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ಮಧ್ಯಂತರ ಆದೇಶ ಹೊರಡಿಸಿದರು.
ಸಾರ್ವಜನಿಕರ ಅಭಿಪ್ರಾಯ ಹಾಗೂ ಕುತೂಹಲ:
ಈ ಬೆಳವಣಿಗೆಯಿಂದ ಮಡಿಕೇರಿ ಹಾಗೂ ಗೋಣಿಕೊಪ್ಪದ ದಸರಾ ಶೋಭಾಯಾತ್ರೆಗಳ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆ ಹಾಗೂ ಕುತೂಹಲ ಮೂಡಿದೆ. ಮಡಿಕೇರಿಯ ಕೆಲವು ಸ್ಥಳೀಯರ ಅಭಿಪ್ರಾಯದಂತೆ, ಡಿಜೆ ಇಲ್ಲದೆ ಹೋದಲ್ಲಿ ಮೆರವಣಿಗೆಯಲ್ಲಿ ಜನಸಂದಣಿ ಮತ್ತು ಕಳೆ ಕಡಿಮೆಯಾಗಬಹುದೆಂಬ ಅಭಿಪ್ರಾಯವೊಂದಿದ್ದರೆ, ಮತ್ತೊಂದೆಡೆ ತೀವ್ರ ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ನ್ಯಾಯಾಲಯ ಮತ್ತು ಜಿಲ್ಲಾಡಳಿತ ತೆಗೆದುಕೊಂಡಿರುವ ಈ ಕಠಿಣ ನಿಲುವು ಸಮಂಜಸವಾಗಿದೆ ಎಂಬ ವಾದವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ, ಈ ಬಾರಿಯ ತಾ. ೨೧ ರಂದು (ಇಂದು) ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಡಿಜೆ ಇರುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಪ್ರಸ್ತುತ ಕಾನೂನಾತ್ಮಕವಾಗಿ ನಿಷೇಧದ ಮುದ್ರೆ ಬಿದ್ದಿದೆ. ಅಲ್ಲದೆ ವೀರಾಜಪೇಟೆಯ ಗೌರಿ ಗಣೇಶೋತ್ಸವ ವೇಳೆ ನಡೆದ ದುರ್ಘಟನೆಯಲ್ಲಿ ಸಾವಿಗೀಡಾದ ಹುಬ್ಬಳ್ಳಿಯ ಬಸವರಾಜವಿಗೆ ಪರಿಹಾರ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಪರಿಹಾರ ಕೊಡುವುದಾದರೂ ಯಾರು, ವೀರಾಜಪೇಟೆಯ ಸಾರ್ವಜನಿಕರು ಈ ನಿಟ್ಟಿನಲ್ಲಿ ಆಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಎದ್ದಿದೆ.