ಪೊನ್ನಂಪೇಟೆ, ಅ. ೨೦: ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಯುವ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಯುವ ದಸರಾ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಅದ್ಭುತ ನೃತ್ಯ ವೈಭವ ಮೂಡಿಬಂತು.

ನೃತ್ಯ ವೈಭವ ವೀಕ್ಷಿಸಲು ದಸರಾ ವೇದಿಕೆ ಮುಂಭಾಗದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ವಿವಿಧ ಭಾಗಗಳಿಂದ ಆಗಮಿಸಿದ್ದ ನೃತ್ಯ ತಂಡಗಳು ಒಂದಕ್ಕಿAತ ಒಂದು ಅದ್ಭುತ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಯುವ ದಸರಾ ಅಂಗವಾಗಿ ಎರಡು ವಿಭಾಗಗಳಲ್ಲಿ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ರಾಜ್ಯ ಮಟ್ಟದ ವೃತ್ತಿಪರ ನೃತ್ಯ ಸ್ಪರ್ಧೆ ಹಾಗೂ ಯುವ ನೃತ್ಯೋತ್ಸವ - ಅಂತರ ಕಾಲೇಜು ನೃತ್ಯ ಸ್ಪರ್ಧೆ ನಡೆಯಿತು.

ಪೌರಾಣಿಕ ಕಥಾನಕ, ಜನಪದ ಸಂಸ್ಕೃತಿ, ಪರಿಸರ ಸಂರಕ್ಷಣೆ, ದೇಶಪ್ರೇಮವನ್ನು ಬಿಂಬಿಸುವ ನೃತ್ಯಗಳು ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡವು. ಹೆಜ್ಜೆ ಹೆಜ್ಜೆಗೂ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಕೊನೆಯವರೆಗೂ ಪ್ರೇಕ್ಷಕರು ಕದಲದೆ ಎಲ್ಲಾ ತಂಡಗಳ ನೃತ್ಯವನ್ನು ಆಸ್ವಾದಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಕಾವೇರಿ ದಸರಾ ಸಮಿತಿ ಪದಾಧಿಕಾರಿಗಳು, ತೀರ್ಪುಗಾರರು ಹಾಗೂ ಸಾವಿರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಫಲಿತಾಂಶ: ಕಾಲೇಜು ವಿದ್ಯಾರ್ಥಿಗಳ ನೃತ್ಯ ಸ್ಪರ್ಧೆ ವಿಭಾಗದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ತಂಡ ಪ್ರಥಮ, ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ದ್ವಿತೀಯ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು.

ವೃತ್ತಿ ಪರ ನೃತ್ಯ ಸ್ಪರ್ಧೆ ವಿಭಾಗದಲ್ಲಿ ಕಿಂಗ್ಸ್ ಆಫ್ ಕೂರ್ಗ್ ಮಡಿಕೇರಿ ಪ್ರಥಮ, ನಾಟ್ಯ ಕಲಾ ತಂಡ ಮಡಿಕೇರಿ ದ್ವಿತೀಯ, ಟ್ರೈಬ್ರೇಕರ್ ಕುಶಾಲನಗರ ತೃತೀಯ ಸ್ಥಾನ ಪಡೆಯಿತು.