ಮಡಿಕೇರಿ, ಅ. ೧೯: ನಾಡಹಬ್ಬ ದಸರಾ ವೈಭವಕ್ಕೆ ಕೊಡಗಿನಲ್ಲಿ ವರುಣನ ಆತಂಕ ಎದುರಾಗುತ್ತಿರುವುದು ಜನತೆಯಲ್ಲಿ ನಿರಾಶೆಯ ಭಾವ ಮೂಡಿಸುತ್ತಿದೆ. ಕಳೆದ ಕೆಲದಿನಗಳಿಂದ ಬಿಸಿಲಿನ ವಾತಾವರಣ ಇದ್ದರೂ ದಿಢೀರನೆ ಮೋಡ ಆವರಿಸಿ ಗುಡುಗು ಮಿಂಚಿನ ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ತಾ. ೨೦ ರಂದು (ಇಂದು) ಜಿಲ್ಲೆಯ ವಿವಿಧೆಡೆ ಅದ್ದೂರಿ ಆಯುಧ ಪೂಜಾ ಸಮಾರಂಭ ಜರುಗಲಿದ್ದು, ಅಂತಿಮ ಹಂತದ ಸಿದ್ಧತೆಯಲ್ಲಿರುವ ಆಯೋಜಕರು ಪರದಾಡುವಂತಾಗಿದೆ. ಮಂಗಳವಾರ ಆಯುಧ ಪೂಜೆಯ ಸಡಗರದೊಂದಿಗೆ ಮರುದಿನ ನಾಡಹಬ್ಬ ವಿಜಯದಶಮಿಯ ವೈಭವ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ದಕ್ಷಿಣ ಕೊಡಗಿನ ವಾಣಿಜ್ಯ ನಗರಿ ಗೋಣಿಕೊಪ್ಪದಲ್ಲಿ ಜರುಗಲಿದೆ. ಈ ಎರಡೂ ಸ್ಥಳಗಳಲ್ಲಿ ಆಗಾಗ್ಗೆ ವಾತಾವರಣ ಬದಲಾಗುತ್ತಿರುವುದು ಹಾಗೂ ಸಂಘಟಕರಿಗೆ ಇರಿಸು ಮುರಿಸಾಗುತ್ತಿದೆ.
ಮಡಿಕೇರಿ ಹಾಗೂ ಗೋಣೀಕೊಪ್ಪ ಈ ಎರಡೂ ಸ್ಥಳಗಳಲ್ಲಿ ದಶಮಂಟಪಗಳ ಶೋಭಾಯಾತ್ರೆ ಕೊಡಗಿನ ದಸರಾದ ಆಕರ್ಷಣೆ. ಆಯಾ ಮಂಟಪ ಸಮಿತಿಯವರು, ದಶಮಂಟಪ ಸಮಿತಿಯವರು ವಿಶೇಷ ಪರಿಶ್ರಮ ವಹಿಸಿ ಸಿದ್ಧತೆಯಲ್ಲಿ ತೊಡಗಿದ್ದಾರೆ.೪ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಆದರೆ, ಪ್ರಸ್ತುತದ ವಾತಾವರಣ ಮಾತ್ರ ವ್ಯವಸ್ಥೆಗೆ ಅಡ್ಡಿಪಡಿಸುತ್ತಿರುವುದು ವಿಷಾದಕರವಾಗಿದೆ. ತಾ. ೧೯ ರ ಸೋಮವಾರ ಬೆಳ್ಳಿಗ್ಗೆಯಿಂದಲೇ ಮೋಡ-ಬಿಸಿಲು ಕಣ್ಣಾಮುಚ್ಚಾಲೆಯಂತಿತ್ತು. ೧೧.೩೦ ರಿಂದ ಸುಮಾರು ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು. ಆಯುಧ ಪೂಜೆಯ ಸ್ವಚ್ಛತೆ-ಸಿದ್ಧತೆಯಲ್ಲಿದ್ದ ಅಂಗಡಿ ಮಾಲೀಕರು, ವರ್ಕ್ಶಾಪ್ನವರು ಇನ್ನಿತರ ಜನಸಾಮಾನ್ಯರು ಪರದಾಡಬೇಕಾಯಿತು.
ಭಾನುವಾರ ಅಪರಾಹ್ನ ಸಿಡಿಲಿನ ರಭಸಕ್ಕೆ ಜನರು ಬೆಚ್ಚಿಬೀಳುವಂತಾಗಿತ್ತು. ಆದರೂ ಸಂಜೆಯ ಯುವದಸರಾದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷ. ವಾತಾವರಣದಲ್ಲಿ ಏನೇ ಬದಲಾವಣೆಗಳಾದರೂ ವಿಜಯದಶಮಿಯ ವೈಭವಕ್ಕೆ ಈ ತನಕ ಸಮಸ್ಯೆಯಾಗಿಲ್ಲ. ಅಂತಿಮ ದಿನದಂದು ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬುದು ಜನತೆಯ ನಂಬಿಕೆಯೂ ಆಗಿದೆ.
- ಶಶಿ