ಶ್ರೀಮಂಗಲ, ಅ. ೧೯: ಜಾತಿ ಮತ್ತು ಧರ್ಮಗಳ ನಡುವೆ ವಿಭಜನೆ ಮೂಡಿಸಿ, ಪ್ರಚೋದನಕಾರಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಯಾವುದೇ ಜಾತಿ, ಧರ್ಮದ ತಾರತಮ್ಯ ಮಾಡದೆ, ಎಲ್ಲ ಸಮುದಾಯಗಳ ಹಿತಾಸಕ್ತಿಗೆ ಸಂವಿಧಾನಬದ್ಧವಾಗಿ ಹಾಗೂ ಸಾಮಾಜಿಕ ನ್ಯಾಯದ ತತ್ವದಡಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ರೂ. ೮ ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ನೂತನ ಆಟೋ ನಿಲ್ದಾಣವನ್ನು ಉದ್ಘಾಟಿಸಿ, ಸ್ವತಃ ಆಟೋ ಚಾಲನೆ ಮಾಡುವ ಮೂಲಕ ಗಮನ ಸೆಳೆದ ಅವರು, ಬಳಿಕ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಜನರು ಆಶೀರ್ವದಿಸಿ ಶಾಸಕನಾಗಿ ಆಯ್ಕೆಯಾಗಿ ಮೂರು ವರ್ಷಗಳಾಗಿವೆ. ಈ ಅವಧಿಯಲ್ಲಿ ವಿವಿಧ ಸಮುದಾಯಗಳ ಐನ್ಮನೆಗಳು, ರಸ್ತೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಬಸ್ ತಂಗುದಾಣಗಳು, ಕ್ರೀಡಾ ಸಂಕೀರ್ಣಗಳು, ವಿದ್ಯುತ್ ಸೌಲಭ್ಯಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಸತಿ ಯೋಜನೆಗಳು ಹಾಗೂ ವಸತಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಸುಮಾರು ೨,೦೦೦ ಕೋಟಿ ಅನುದಾನದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಟೋ ಚಾಲಕರ ಸಮಸ್ಯೆಗಳು ಮತ್ತು ಅವರ ಬದುಕಿನ ಸವಾಲುಗಳು ನನಗೆ ತಿಳಿದಿವೆ. ೧೯೯೪ರಲ್ಲಿ ತಮ್ಮ ತಂದೆ ದಿವಂಗತ ಎ.ಕೆ. ಸುಬ್ಬಯ್ಯ ಅವರು ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಬಿಎಸ್ಪಿ ಪಕ್ಷದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಪಕ್ಷಕ್ಕೆ ಕಾರ್ಯಕರ್ತರ ಕೊರತೆಯಿತ್ತು. ಆಗ ತಾನೇ ಆಟೋ ಚಾಲನೆ ಮಾಡಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಪೊನ್ನಣ್ಣ ಸ್ಮರಿಸಿದರು.
ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ವಿದ್ಯುತ್ ಸಮಸ್ಯೆ ನಿವಾರಣೆಗೆ ವಿಶೇಷ ಗಮನ ಹರಿಸಲಾಗಿದೆ. ಹೊಸ ವಿದ್ಯುತ್ ಮಾರ್ಗಗಳು, ಕಂಬಗಳು, ತಂತಿಗಳು ಹಾಗೂ ಟ್ರಾನ್ಸ್ಫಾರ್ಮರ್ಗಳ ಅಳವಡಿಕೆಗೆ ವೀರಾಜಪೇಟೆ ಕ್ಷೇತ್ರದಲ್ಲಿ ೧೨೫ ಕೋಟಿ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ೪೫ ಕೋಟಿ ಅನುದಾನದಲ್ಲಿ ಕ್ರೀಡಾ ಸಂಕೀರ್ಣಗಳ ನಿರ್ಮಾಣ, ೧೦ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ವಸತಿ ಶಾಲೆಗಳ ಅಭಿವೃದ್ಧಿ, ಹಾಡಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಸತಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ
೪೦ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಸ್ಥಳೀಯ ಸಾರ್ವಜನಿಕರು ತಮ್ಮ ವಿವಿಧ ಕುಂದುಕೊರತೆಗಳಿಗೆ ಸಂಬAಧಿಸಿದ ಮನವಿಗಳನ್ನು ಶಾಸಕರಿಗೆ ಸಲ್ಲಿಸಿದರು.
ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಡಿಸಿಸಿ ಸದಸ್ಯರಾದ ಚೊಟ್ಟೆಯಂಡಮಾಡ ವಿಶು ಹಾಗೂ ಮುಕ್ಕಾಟಿರ ಸಂದೀಪ್, ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಂಡಮಾಡ ಪ್ರವೀಣ್ ಪೊನ್ನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿರಿಯರಾದ ಅಪ್ಪಚ್ಚಂಗಡ ಮೋಟಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಬಾಲಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪಲ್ವಿನ್ ಪೂಣಚ್ಚ ಹಾಗೂ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಡಿಸಿಸಿ ಸದಸ್ಯ ಪೆಮ್ಮಂಡ ರಾಜ ಕುಶಾಲಪ್ಪ, ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಕಾರ್ಯದರ್ಶಿ ಚೆಟ್ಟಂಗಡ ಪ್ರಕಾಶ್, ಖಜಾಂಚಿ ಮಚ್ಚಮಾಡ ದಿನು ಕರುಂಬಯ್ಯ, ಚೊಟ್ಟೆಯಂಡಮಾಡ ಬೋಸ್ ವಿಶ್ವನಾಥ್, ಉದಯ್, ಚೋಕಿರ ಕಲ್ಪನಾ, ಕಾಯಪಂಡ ಕಾವೇರಪ್ಪ, ಬಲ್ಯಮೀದೇರಿರ ಸೋಮಣ್ಣ, ಕಳ್ಳೆಂಗಡ ಸಚಿನ್, ಮಾಣೀರ ವಿಜಯ ನಂಜಪ್ಪ ಹಾಗೂ ಮಚ್ಚಾಮಾಡ ರಂಜಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
ರೂಪ ದೇವಯ್ಯ ಪ್ರಾರ್ಥಿಸಿದರು. ಆಟೋ ನಿಲ್ದಾಣ ಉದ್ಘಾಟನೆಯ ಬಳಿಕ ಶಾಸಕರನ್ನು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ಪಟಾಕಿ ಸಿಡಿಸಿ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆಟೋ ಚಾಲಕರು ಸಂಭ್ರಮಿಸಿದರು.
ವರದಿ: ಹರೀಶ್ ಮಾದಪ್ಪ