ಮಡಿಕೇರಿ, ಅ. ೧೮: ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಗಾಂಧಿ ಮೈದಾನದಲ್ಲಿ ಹಳ್ಳಿಕಾರ್ ಹೋರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮೊದಲಿಗೆ ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಹೋರಿಗಳಿಗೆ ಪೂಜೆ ಸಲ್ಲಿಸಿ ರಾಜಾಸೀಟು ಮಾರ್ಗವಾಗಿ ಮೇಜರ್ ಮುತ್ತಣ್ಣ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಗಾಂಧಿ ಮೈದಾನದಲ್ಲಿ ಪ್ರದರ್ಶನ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ, ರೈತರು ಸಮಾಜದ ಜೀವನಾಡಿಗಳಾಗಿದ್ದು ಅವರ ಬದುಕನ್ನು ಇತರರಿಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮಡಿಕೇರಿ ದಸರಾ ಕ್ರೀಡಾ ಸಮಿತಿ ಉತ್ತಮ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.

ಅರಕಲಗೂಡು ತಾಲೂಕು ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಅನ್ಯೋನ್ಯತೆಯ ಬದುಕು ಅವಶ್ಯ ಎಂದರು.

ದೀಪ ಬೆಳಗಲು ಸಾಧ್ಯವಿಲ್ಲದಿದ್ದರೂ ಇತರರ ಮನೆಯ ದೀಪವನ್ನು ಆರಿಸಬಾರದು, ಮನೆ ಕಟ್ಟಲಾಗದಿದ್ದರೂ ಇತರರ ಮನೆಯನ್ನು ಮುರಿಯುವ ಕೆಲಸ ಮಾಡಬಾರದು, ಅನ್ನ ಮಾಡಲಾಗದಿದ್ದರೂ ಇತರರ ಅನ್ನಕ್ಕೆ ಮಣ್ಣು ಹಾಕಬಾರದು ಎನ್ನುವ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅವರು ಮಾತನಾಡಿ, ಅನ್ನದಾತರಾಗಿರುವ ರೈತರು ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ಜೀವನ ನಡೆಸುತ್ತಿದ್ದಾರೆ, ಆದರೂ ಹಿರಿಯ ತಲೆಮಾರುಗಳು ನಡೆಸಿಕೊಂಡು ಬಂದಿರುವ ಪರಂಪರೆಯನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ರೈತರು ಜಮೀನನ್ನು ಮಾರುತ್ತಿದ್ದು ದಯವಿಟ್ಟು ಅಂತಹ ಕೃತ್ಯಕ್ಕೆ ರೈತರು ಮುಂದಾಗಬಾರದು ಎಂದು ಮನವಿ ಮಾಡಿದರು. ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ನೇತೃತ್ವದಲ್ಲಿ ಯುವ ಪಡೆ ಕಳೆದ ನಾಲ್ಕು ವರ್ಷಗಳಿಂದ ದಸರಾ ಸಂದರ್ಭ ಅನೇಕ ಹೊಸ ಆವಿಷ್ಕಾರಗಳ ಮೂಲಕ ದಸರಾಕ್ಕೆ ಮೆರುಗು ನೀಡುತ್ತಿದೆ ಎಂದು ಚಿದ್ವಿಲಾಸ್ ಶ್ಲಾಘಿಸಿದರು

ದಸರಾ ಸಮಿತಿಯ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಮುಂದಿನ ವರ್ಷದಿಂದ ಮಡಿಕೇರಿ ದಸರಾದಲ್ಲಿ ರೈತ ದಸರಾವನ್ನು ಸೇರಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದರು. ಮಂಡ್ಯದ ಸಿನಿಮಾ ನಟ ಲೋಕೇಶ್ ಅವರು ಮಾತನಾಡಿ, ಮುಂದಿನ ವರ್ಷ ಮಡಿಕೇರಿ ದಸರಾದಲ್ಲಿ ಜಾನುವಾರು ಜಾತ್ರೆ ಏರ್ಪಡಿಸಿದಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.

ಕ್ರೀಡಾ ಸಮಿತಿಯ ಅಧ್ಯಕ್ಷ ಪ್ರದೀಪ್ ಕರ್ಕೆರ ಮಾತನಾಡಿ, ಪ್ರಪ್ರಥಮ ಬಾರಿಗೆ ಏರ್ಪಡಿಸಿರುವ ಹಳ್ಳಿಕಾರ್ ಹೋರಿ ಪ್ರದರ್ಶನದಲ್ಲಿ ೧೦ ಜೋಡಿಗಳು ಪಾಲ್ಗೊಂಡಿದ್ದು ಸ್ಪರ್ಧಾ ವಿಜೇತರಿಗೆ ನಾಲ್ಕು ಬಹುಮಾನಗಳನ್ನು ನೀಡುತ್ತಿದ್ದು ೪೦,೦೦೦, ೨೦,೦೦೦, ೧೦,೦೦೦ ಹಾಗೂ ೫,೦೦೦ ನಗದು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಹುಮಾನದೊಂದಿಗೆ ಫಲಕಗಳನ್ನು ನೀಡಲಾಗುವುದು ಎಂದು ಘೋಷಿಸಿದರು

ವೇದಿಕೆಯಲ್ಲಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತ, ನಗರಸಭಾ ಸದಸ್ಯ ಸತೀಶ್, ಉದ್ಯಮಿ ಶರಣ್ ಪೂಣಚ್ಚ, ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ ಮಾತನಾಡಿದರು.

ಕ್ರೀಡಾ ಸಮಿತಿಯ ಸಲಹೆಗಾರ ರವಿ ಕರ್ಕೆರ ವೇದಿಕೆಯಲ್ಲಿದ್ದರು. ಕ್ರೀಡಾ ಸಮಿತಿಯ ಪದಾಧಿಕಾರಿ ವಾಗೀಶ್ ಪ್ರಾರ್ಥಿಸಿ, ಪ್ರದೀಪ್ ಕಟ್ಟೆಮಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕನಿಷ್ಟ ರೂ. ೨ ಲಕ್ಷ ಬೆಲೆಬಾಳುವ ಜೋಡಿ ಎತ್ತುಗಳಿಂದ ರೂ. ೬.೫ ಲಕ್ಷ ವೆಚ್ಚದ ಎತ್ತುಗಳು ಪ್ರದರ್ಶನದಲ್ಲಿ ಕಂಡು ಬಂದವು. ಬೆಟ್ಟದಪುರ, ಪಿರಿಯಾಪಟ್ಟಣ, ಹುಣಸೂರು ಕಡೆಗಳಿಂದ ಜೋಡಿಯ ಎತ್ತುಗಳು ಪ್ರದರ್ಶನದಲ್ಲಿದ್ದವು.