ಪೊನ್ನAಪೇಟೆ, ಅ. ೧೮: ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ನರಸಿಂಹ ಜೋಷಿ ಹಾಗೂ ಬಸವರಾಜು ಮಹಾಮನಿ ಅವರ ನಗೆಹಬ್ಬ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ಜೂನಿಯರ್ ಬೀಚಿ ಖ್ಯಾತಿಯ ಗಂಗಾವತಿ ಪ್ರಾಣೇಶ್ ಅವರು ತಮ್ಮ ಉತ್ತರ ಕರ್ನಾಟಕದ ವಿಶಿಷ್ಟ ಶೈಲಿಯ ಮಾತುಗಾರಿಕೆ, ಜೀವನಾನುಭವದ ಪ್ರಸಂಗಗಳು, ಸಾಮಾಜಿಕ ಅರಿವು ಮೂಡಿಸುವ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮಿಮಿಕ್ರಿ ಕಲಾವಿದ ಹಾಗೂ ಹಾಸ್ಯ ಮಾತುಗಾರ ನರಸಿಂಹ ಜೋಷಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಶೈಲಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರ ಮಾತಿನ ಧಾಟಿಯನ್ನು ಅನುಕರಿಸುವ ಮೂಲಕ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.
ಮತ್ತೊಬ್ಬ ಕಲಾವಿದ ಬಸವರಾಜ ಮಹಾಮನಿ ಅವರು ಉತ್ತರ ಕರ್ನಾಟಕ ಭಾಷಾ ಸೊಗಡಿನೊಂದಿಗೆ ದಿನನಿತ್ಯ ನಡೆಯುವ ಸಂಭಾಷಣೆಗಳನ್ನು, ಕುಟುಂಬದ ಸಣ್ಣ-ಪುಟ್ಟ ಜಗಳಗಳನ್ನು ತಮಾಷೆಯಾಗಿ ಬಿಚ್ಚಿಟ್ಟ ರೀತಿ ಪ್ರೇಕ್ಷಕರಿಗೆ ಇಷ್ಟವಾಯಿತು.
ಇದೇ ವೇದಿಕೆಯಲ್ಲಿ ಖ್ಯಾತ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರು ನಡೆಸಿಕೊಟ್ಟ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ನೆರೆದವರಿಗೆ ಜಾನಪದ ಸೊಗಡನ್ನು ಪಸರಿಸಿತು. ಗೋಣಿಕೊಪ್ಪದ ಐಕ್ಯಂ ಡ್ಯಾನ್ಸ್ ಸ್ಟುಡಿಯೋ, ವೀರಾಜಪೇಟೆ ಇಂಟೋಪಿಸ್ ಡ್ಯಾನ್ಸ್ ಟೀಮ್, ಸುಳ್ಯ ಬೆಳ್ಳಾರೆ ಡ್ಯಾನ್ಸ್ ಬೀಟ್ಸ್ ತಂಡದಿAದ ನೃತ್ಯ ಕಾರ್ಯಕ್ರಮ ನಡೆಯಿತು.