ಸುAಟಿಕೊಪ್ಪ, ಅ. ೧೭: ಹಿಂದೂ ಮಲಯಾಳಿ ಸಮಾಜದವರು ತಮ್ಮ ಮನೆ ಹಬ್ಬವಾದ ಓಣಂ ಹಬ್ಬವನ್ನು ಮೂಲ ಹಬ್ಬವಾಗಿಸಿ ಎಲ್ಲರೊಂದಿಗೆ ಬೆರೆತು ಸಂಭ್ರಮಿಸುವುದು ಸಮಾಜಕ್ಕೊಂದು ಮಾದರಿ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಗದ್ದೆಹಳ್ಳದ ಎಸ್.ಎಸ್. ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಸುಂಟಿಕೊಪ್ಪ ಮಲಯಾಳಿ ಸಮಾಜದ ೧೯ನೇ ವರ್ಷದ ಓಣಂ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ, ತಾಲೂಕುಮಟ್ಟದಲ್ಲಿ ಮಲಯಾಳಿ ಸಮಾಜದವರಿಗೆ ನಿವೇಶನ ಬೇಕೆಂಬ ಬೇಡಿಕೆ ಇದೆ. ಜಿಲ್ಲಾಮಟ್ಟದಲ್ಲಿ ನಿವೇಶನ ಗುರುತಿಸುವ ಕೆಲಸ ನಡೆದಿದ್ದು, ಶಾಸಕರ ಅನುದಾನವನ್ನು ನೀಡಲಾಗುವುದೆಂದು ಭರವಸೆ ನೀಡಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದವರು ಜಾಗ ಗುರುತಿಸಿದ್ದಲ್ಲಿ ಕಟ್ಟಡ ನಿರ್ಮಾಣಕ್ಕೂ ಸಹಕಾರ ನೀಡುವುದಾಗಿ ಅವರು ಹೇಳಿದರು.

ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕೊಡಗು ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್ ಮಾತನಾಡಿ, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡುವುದರೊಂದಿಗೆ ಸಂಸ್ಕಾರಯುತ ಜೀವನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಜವಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳಿದರು. ಜೊತೆಗೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ಪೋಷಕರ ಗಮನವಿರಬೇಕೆಂದು ಅವರು ಕಿವಿಮಾತು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲೂ ಸಮಾಜವು ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹಾರೈಸಿದರು. ಸಮಾಜದಲ್ಲಿ ಹತ್ತು ಹಲವು ಜಾತಿ ಉಪಜಾತಿಗಳಿದ್ದು ಸಂಘಟನೆಯ ಮೂಲಕ ಸಮಾಜಕ್ಕೆ ಬೇಕಾಗುವ ಬೇಕು ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಲು ಸಂಘಟನೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಿಂದೂ ಮಲಯಾಳಿ ಸಮಾಜವು ತುಂಬಾ ಸಾಧನೆಯನ್ನು ಮಾಡಿದ್ದು ಸಮಾಜದ ಪ್ರತಿಭೆಗಳು ಹೋಬಳಿ ಮಟ್ಟದಿಂದ ಹಿಡಿದು ದೇಶ - ವಿದೇಶಗಳಲ್ಲಿ ಕೂಡ ತಮ್ಮ ಸಾಧನೆ ಮೂಡಿಸಿರುವುದು ಹೆಮ್ಮೆಯ ವಿಚಾರವೆಂದು ಶ್ಲಾಘಿಸಿದರು.

ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ಹಿಂದೂ ಮಲಯಾಳಿ ಸಮಾಜದ ಒಗ್ಗಟ್ಟು ಮತ್ತು ಸಂಘಟನೆ ಎಲ್ಲರಿಗೂ ಅನುಕರಣಿಯ ಮಾದರಿ ಎಂದು ಹೇಳಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಕೆ. ವಾಸುದೇವ ಅವರು ಅಧ್ಯಕ್ಷತೆ ವಹಿಸಿದ್ದರು. ಸುಂಟಿಕೊಪ್ಪ ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್. ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಟಿ.ಕೆ. ಸುಧೀರ್, ಪ್ರಧಾನ ಕಾರ್ಯದರ್ಶಿ ಉಣ್ಣಿಕೃಷ್ಣನ್, ಕಾನೂನು ಸಲಹೆಗಾರ ಟಿ.ಆರ್. ವಾಸುದೇವ, ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷರುಗಳಾದ ಪಿ.ಸಿ. ಮೋಹನ್, ವಿ.ಎ. ಸಂತೋಷ್, ರಮೇಶ್‌ಪಿಳ್ಳೆ, ಮೂರ್ನಾಡು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಬಾಬು, ಸುಂಟಿಕೊಪ್ಪ ಮಲಯಾಳಿ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ಶೈಜಾ, ಸುಂಟಿಕೊಪ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಶ್ವಿಧಿ ಕಮಲಾಸನ್ ಪ್ರಾರ್ಥಿಸಿ, ಚಿತ್ರ ಸುರೇಶ್ ಸ್ವಾಗತಿಸಿ, ಜ್ಯೋತಿ ನಿರೂಪಿಸಿದರು.