ಭಾಗಮಂಡಲ, ಅ. ೧೭: ಸಾಂಪ್ರದಾಯಿಕವಾದ ಉಡುಗೆ - ತೊಡುಗೆ, ತಳಿಯತಕ್ಕಿ ಬೊಳಕ್ ಹಿಡಿದ ಮಹಿಳೆಯರು, ದುಡಿಕೊಟ್ಟ್ ಪಾಟ್, ಮಾತೆ ಕಾವೇರಿಯ ಕುರಿತಾದ ಭಾರೀ ಜಯಘೋಷಗಳ ನಡುವೆ ಮಾತೆ ಕಾವೇರಿಯನ್ನು ಕುಲದೇವಿಯಾಗಿ ಆರಾಧಿಸುವ ಕೊಡವ ಜನಾಂಗ ಬಾಂಧವರು ಭಾಗಮಂಡಲ ಕ್ಷೇತ್ರದಿಂದ ತಲಕಾವೇರಿ ಸನ್ನಿಧಿಗೆ ಭಕ್ತಿಭಾವದ ಹೆಜ್ಜೆ ಹಾಕಿದರು.
ಈ ಹಿಂದಿನ ಕಾಲದಲ್ಲಿ ನಡೆದುಕೊಂಡು ಬಂದಿದ್ದ ಈ ಪಾದಯಾತ್ರೆ ನಡುವೆ ಇಲ್ಲದಂತಾಗಿದ್ದು, ಇದೀಗ ಕೆಲವು ವರ್ಷಗಳಿಂದ ಮತ್ತೆ ಸಂಪ್ರದಾಯಬದ್ಧವಾಗಿ ಮುಂದುವರಿದುಕೊAಡು ಬರುತ್ತಿದೆ. ಈ ಬಾರಿ ಒಂಭತ್ತನೆಯ ವರ್ಷದ ಪಾದಯಾತ್ರೆ - ಕಾವೇರಿ ನಡ್ಪು ಜರುಗಿತು. ಸಾವಿರಾರು ಮಂದಿ ಕುಪ್ಯಚೇಲೆ, ಕೊಡವ ಸೀರೆ, ವಸ್ತçಧಾರಿಗಳಾಗಿ ತಳಿಯ ತಕ್ಕಿಬೊಳಕ್ ದುಡಿಕೊಟ್ಟ್ಪಾಟ್, ಬಾಳೋಪಾಟ್ನೊಂದಿಗೆ ಸುಮಾರು ೮ ಕಿ.ಮೀ. ಅಂತರವನ್ನು ಪಾದಯಾತ್ರೆಯ ಮೂಲಕ ಕ್ರಮಿಸಿ ಅಮ್ಮನ ಸ್ವಾಗತಕ್ಕೆ ತಲಕಾವೇರಿಯ ಪುಣ್ಯ ಕುಂಡಿಕೆಯತ್ತ ಸಾಗಿ ಬಂದರು. ನಡಿಗೆಯ ಸಂದರ್ಭ ಕಾವೇರಿಬಾಳೋ, ಕನ್ನಿಬಾಳೋ, ಕುಲದೇವಿ ಕಾವೇರಿ, ಉಕ್ಕಿ ಬಾ ಕಾವೇರಮ್ಮೆ ಎಂಬಿತ್ಯಾದಿ ಜಯಘೋಷಗಳು ಕೇಳಿಬಂದವು.
ಅಪರಾಹ್ನ ೩.೪೫ರ ವೇಳೆಗೆ ಪಾದಯಾತ್ರೆ ಆರಂಭಗೊAಡಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಪೋರೆರ ಬಿದ್ದಪ್ಪ ತಪ್ಪಡ್ಕ ಕಟ್ಟಿ ಪ್ರಾರ್ಥಿಸಿದರು. ದೇವಾಲಯದ ಸುತ್ತಲೂ ತಳಿಯತಕ್ಕಿ ಬೊಳಕ್ ದುಡಿಕೊಟ್ಟ್ ಪಾಟ್ ಸಹಿತವಾದ ಪ್ರದಕ್ಷಿಣೆಯೊಂದಿಗೆ ಕಾವೇರಿ ನಡ್ಪು ಆರಂಭಗೊAಡಿತು.
ಶಾಸಕ ಪೊನ್ನಣ್ಣ ನಡಿಗೆ
ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಪತ್ನಿ ಕಾಂಚನ್ ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಭಾಗಮಂಡಲ - ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಥ್ಯು, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಜೊತೆಗಿದ್ದರು. ಮಾರ್ಗದ ನಡುವೆ ನೀರು, ತಂಪುಪಾನೀಯ, ಮಜ್ಜಿಗೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಖಿಲ ಕೊಡವ ಸಮಾಜ, ವಿವಿಧ ಕೊಡವ ಸಮಾಜಗಳು, ಕನೆಕ್ಟಿಂಗ್ ಕೊಡವಾಸ್, ಜಬ್ಬೂಮಿ, ತಲಕಾವೇರಿಕ್ ತಿಂಗಕೋರ್ ಮೊಟ್ಟ್, ಕೊಡವ ರೈಡರ್ಸ್ ಕ್ಲಬ್ ಮತ್ತಿತರ ಸಂಘಟನೆಗಳು ಕುಟುಂಬವಾರು ಪ್ರತಿನಿಧಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು, ಮೈಸೂರು ಕೊಡವ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.