ವೀರಾಜಪೇಟೆ, ಅ. ೧೭: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ವನದುರ್ಗಾ ದೇವಿಗೆ ವಿಶೇಷ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನ ಮೂರ್ತಿ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು. ನವರಾತ್ರಿ ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಧಾರ್ಮಿಕ ಸೇವೆಗಳು ನಡೆದವು. ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ವನದುರ್ಗಾ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂಕಲ್ಪ ನೆರವೇರಿಸಲಾಯಿತು.
ಉತ್ಸವದ ಅಂಗವಾಗಿ ದೇವಿಗೆ ಅಲಂಕಾರ ಪೂಜೆ, ಹಾಲಿನ ಅಭಿಷೇಕ, ಸೀಯಾಳದ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಸಮರ್ಪಿಸಲಾಯಿತು. ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಸೇವೆಗಳೂ ಜರುಗಿದವು. ಮಹಾಪೂಜೆಯ ಬಳಿಕ ಅರ್ಚಕರು ಭಕ್ತಾದಿಗಳ ಕ್ಷೇಮ, ಗ್ರಾಮ ಹಾಗೂ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೇಟೋಳಿ, ಹೆಗ್ಗಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಪಿ. ಸಂತೋಷ್, ಉಪಾಧ್ಯಕ್ಷ ನಂದ ಬಿ.ಜಿ., ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ ಹಾಗೂ ಸದಸ್ಯರಾದ ಸುಮನ, ಸಂಗೀತ, ವೀಣಾ ಶಶಿಧರ್, ರಾಮಶರ್ಮ ಮತ್ತು ಸೀತಮ್ಮ ಉಪಸ್ಥಿತರಿದ್ದರು.