ಮಡಿಕೇರಿ, ಅ. ೧೭: ಮುದ್ದು ಮುದ್ದಾದ ಕೆಲವೊಂದು ಶ್ವಾನಗಳು ಪ್ರೀತಿ ಹುಟ್ಟಿಸಿದವು...ಭಯಾನಕ ಮುಖದ ಶ್ವಾನಗಳು, ಬೃಹತ್ ಆಕಾರದ ಇನ್ನು ಕೆಲವು ಶ್ವಾನಗಳು ಭಯ ಮೂಡಿಸಿದವು... ನಾಯಿಗಳ ಬೊಗಳುವಿಕೆಯ ಶಬ್ದ ಮಡಿಕೇರಿಯ ಗಾಂಧಿ ಮೈದಾನದಲ್ಲಿಂದು ಶ್ವಾನ ಪ್ರ‍್ರಿಯರ ಗಮನಸೆಳೆದವು.. ಸಾಕು ಪ್ರಾಣಿಯಾದ ಶ್ವಾನಗಳೆಂದರೆ ಎಲ್ಲರಿಗೂ ಇಷ್ಟ. ವಿವಿಧ ತಳಿಗಳ ಶ್ವಾನಗಳನ್ನು ಸಾಕಿ ಸಲಹುವ ಹವ್ಯಾಸ ಹಲವರದ್ದು..ಈ ಶ್ವಾನ ಪ್ರಿಯರಿಗೆ ತಮ್ಮ ಮುದ್ದಿನ ಪ್ರಾಣಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ದಸರಾ ಅಂಗವಾಗಿ ಯುವ ದಸರಾ ಸಮಿತಿ ಮೂಲಕ ವೇದಿಕೆ ಕಲ್ಪಿಸಲಾಗಿತ್ತು.

ರಾಜ್ಯಮಟ್ಟದ ಈ ಶ್ವಾನಗಳ ಪ್ರದರ್ಶನದಲ್ಲಿ ಚಿಕ್ಕಮಗಳೂರು, ಮೈಸೂರು, ಬೆಂಗಳೂರಿನಿAದಲೂ ನಾಯಿಪ್ರಿಯರು ತಮ್ಮ ಶ್ವಾನಗಳೊಂದಿಗೆ ಆಗಮಿಸಿ ‘ಡಾಗ್ ಶೋ’ನಲ್ಲಿ ಪಾಲ್ಗೊಂಡರು. ಯುವ ದಸರಾ ಪ್ರಯುಕ್ತ ಕಳೆದ ಬಾರಿ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಶ್ವಾನ ಪ್ರದರ್ಶನ ಪ್ರಖ್ಯಾತಿ ಪಡೆದ ಹಿನ್ನೆಲೆ ಈ ಬಾರಿ ಇನ್ನೂ ಅಧಿಕ ಸಂಖ್ಯೆಯಲ್ಲಿ ಶ್ವಾನಪ್ರಿಯರನ್ನು ಆಕರ್ಷಿಸಿತ್ತು. ವಿವಿಧ ತಳಿಗಳ ೧೦೦ಕ್ಕೂ ಅಧಿಕ ನಾಯಿಗಳು ಪಾಲ್ಗೊಂಡು ಶ್ವಾನ ಪ್ರದರ್ಶನಕ್ಕೆ ಮೆರಗು ನೀಡಿದವು.

ಅತಿವೇಗ ತಳಿಗಳಲ್ಲಿ ಒಂದಾದ ಅರೇಬಿಯನ್ ಮೂಲದ ಸಾಲುಕಿ, ಉಗ್ರ ಸ್ವರೂಪಿಯಾದರೂ ಶಿಸ್ತು ಸಮಾಧಾನ ಪ್ರದರ್ಶಿಸಿದ ಬಾಕ್ಸರ್, ಅಮೇರಿಕನ್ ಬುಲ್‌ಡಾಗ್, ರಾಟ್‌ವೀಲರ್, ಡಾಬರ್‌ಮ್ಯಾನ್, ನಿಷ್ಠಾವಂತ ಜರ್ಮನ್ ಶೆಪರ್ಡ್, ಸ್ನೇಹಮಯಿ ಲ್ಯಾಬ್ರಡಾರ್ ಹಾಗೂ ಗೋಲ್ಡನ್ ರಿಟ್ರೀವರ್, ಸಣ್ಣ ತಳಿಯ ಡ್ಯಾಶುಂಡ್, ಶಿಟ್ಸು, ಕೊರ್ಗಿ, ಪೊಮೆರೇನಿಯನ್, ಪಗ್, ಅತಿವೇಗಿ ಭಾರತೀಯ ಮೂಲದ ಮುಧೋಳ್ ಹಾಗೂ ರಾಜಪಾಳ್ಯಮ್, ೮ ಅಡಿ ಎತ್ತರಕ್ಕೂ ಜಿಗಿಯಬಲ್ಲ ಬೆಲ್ಜಿಯನ್ ಮಲಿನಾಯ್ಸ್, ಆಕರ್ಷಕ ತಳಿಯ ಮಾಲ್ಟಿ ಪೂ, ಪೂಡಲ್, ಬೀಗಲ್, ಅಪರೂಪದ ಡೋಗೋ ಅರ್ಜೆಂಟಿನೊ, ಜರ್ಮನ್ ಪಾಯ್ಟಂರ್, ಇಂಡಿಯನ್ ಪರಿಯೊ, ವೇಯ್ಮರಾನರ್, ಬಿಳಿ ಮೈ ಹಾಗೂ ಕಪ್ಪು ಚುಕ್ಕಿಯ ಡಾಲ್ಮೇನಷನ್, ಅತಿ ಸಣ್ಣ ನಾಯಿ ತಳಿಯಾಗಿರುವ ಚುವ್ಹಾವ ಹಾಗೂ ಅತಿ ದೊಡ್ಡ ತಳಿ ಗ್ರೇಟ್ ಡೇನ್ ಸೇರಿದಂತೆ ಇತರ ತಳಿಯ ಶ್ವಾನಗಳು ‘ಡಾಗ್ ಶೋ‘ದಲ್ಲಿ ಗಮನ ಸೆಳೆದವು.

೬ ತಿಂಗಳೊಳಗಿನ ನಾಯಿಗಳ ವಿಭಾಗ ಹಾಗೂ ವಿವಿಧ ತಳಿಗಳ ವಿಭಾಗಗಳಲ್ಲಿಯೂ ಸ್ಪರ್ಧೆ ನಡೆಯಿತು. ಪ್ರತಿ ವಿಭಾಗದಲ್ಲಿ ಗೆದ್ದ ನಾಯಿ ಚಾಂಪಿಯನ್‌ಶಿಪ್ ರೌಂಡ್‌ನಲ್ಲಿ ಭಾಗವಹಿಸಿದ್ದು, ಅಂತಿಮ ವಿಜೇತರಿಗೆ ರೂ.೧೦,೦೦೦ ನಗದು ಹಾಗೂ ಟ್ರೋಫಿ ನೀಡಲಾಯಿತು. ನಗದು ಹಾಗೂ ಟ್ರೋಫಿಯನ್ನು ಮಡಿಕೇರಿ ವಿಭಾ ಪೆಟ್ ಕೇರ್ ಪಶು ಆಸ್ಪತ್ರೆಯಿಂದ ಪ್ರಾಯೋಜಿಸಲಾಗಿತ್ತು.

‘೨೦೩೦ ರೊಳಗೆ ರೇಬೀಸ್ ಮುಕ್ತ ಭಾರತ’

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಲಿಂಗರಾಜು ದೊಡ್ಡಮನಿ ಅವರು, ೨೦೩೦ ರೊಳಗೆ ದೇಶದಲ್ಲಿ ರೇಬೀಸ್ ರೋಗ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಣತೊಟ್ಟಿವೆ. ಮಾಲೀಕರು ನಾಯಿ, ಬೆಕ್ಕುಗಳಿಗೆ ಕಡ್ಡಾಯವಾಗಿ ರೇಬೀಸ್ ನಿರೋಧಕ ಲಸಿಕೆ ಹಾಕಿಸಿ ರೇಬೀಸ್ ನಿರ್ಮೂಲನೆಗೆ ಪಣತೊಡಬೇಕು ಎಂದರು. ಕಳೆದ ವರ್ಷದ ಯುವ ದಸರಾ ಪ್ರಯುಕ್ತ ನಡೆದ ಶ್ವಾನ ಪ್ರದರ್ಶನದಲ್ಲಿ ೯೦ ನಾಯಿಗಳು ಪಾಲ್ಗೊಂಡಿದ್ದವು. ಈ ಬಾರಿ ೧೦೦ರ ಗಡಿ ದಾಟಿದ್ದು ಉತ್ತಮ ಬೆಳವಣಿಗೆ ಎಂದರು.

ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ, ಶ್ವಾನ ಪ್ರದರ್ಶನ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಮೂಕ ಪ್ರಾಣಿಗಳಿಗೆ ದಯೆ ತೋರಬೇಕೆಂಬ ಸಂದೇಶವೂ ಶ್ವಾನ ಪ್ರದರ್ಶನದ ಮೂಲಕ ಜಾಗೃತಿಯಾಗಿದೆ. ಸರಕಾರಿ ಬಸ್‌ಗಳ ಹಿಂದೆಯೂ ಪ್ರಾಣಿಗಳಿಗೆ ದಯೆ ತೋರಬೇಕೆಂಬ ಸಂದೇಶ ಇರುವುದು ಉತ್ತಮ. ಇದರಿಂದ ಸಾರ್ವಜನಿಕರಿಗೆ ಪ್ರಾಣಿ ದಯೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಕಲಾವತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ತೆನ್ನಿರ ಮೈನಾ ಅವರುಗಳು ಮಾತನಾಡಿ, ಶುಭ ಕೋರಿದರು.

ಜಿಲ್ಲಾ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ ಚಿದಾನಂದ, ಪಾಲಿಕ್ಲಿನಿಕ್ ಮೈಸೂರು ಉಪನಿರ್ದೇಶಕ ಡಾ ಕ್ಯಾಪ್ಟನ್ ತಿಮ್ಮಯ್ಯ, ಸುಳ್ಯ ಪಶು ವೈದ್ಯಕೀಯ ಆಸ್ಪತ್ರೆ ಉಪನಿರ್ದೇಶಕ ನಿತಿನ್ ಪ್ರಭು, ಯುವ ದಸರಾ ಸಮಿತಿಯ ಅಧ್ಯಕ್ಷ ಕವನ್ ಕೊತ್ತೋಳಿ, ಪದಾಧಿಕಾರಿಗಳಾದ ಅತುಲ್ ಶರಣ್, ಅರ್ಜುನ್ ಸೂರ್ಯ, ಲೀನೇಶ್, ಸುನಿಲ್ ಹಾಗೂ ಇತರರು ಹಾಜರಿದ್ದರು.