ಸೋಮವಾರಪೇಟೆ, ಅ. ೧೬: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ತಾ.೧೯ ಮತ್ತು ೨೦ ರಂದು ೫೦ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸುವ ವರ್ಣರಂಜಿತ ವೇದಿಕೆಯಲ್ಲಿ ತಾ. ೧೯ ರ ಸಂಜೆ ೬ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಜೆ ೭ಗಂಟೆಗೆ ಸಂಗೀತ ರಸಮಂಜರಿ ನಡೆಯಲಿದೆ ಎಂದರು.

ತಾ. ೨೦ರಂದು ಬೆಳಿಗ್ಗೆ ೮.೩೦ಕ್ಕೆ ಪಟ್ಟಣದಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಲಿದೆ. ೯.೩೦ಕ್ಕೆ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಗುತ್ತದೆ. ೧೧ಗಂಟೆಗೆ ಸಾರ್ವಜನಿಕರಿಗೆ ಮುಕ್ತ ನೃತ್ಯ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯನ್ನು ಸಂಸದ ಯಧುವೀರ್ ಕೃಷ್ಣದತ್ತ ಒಡೆಯರ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವ ಅಪ್ಪಚ್ಚು ರಂಜನ್ ಸೇರಿದಂತೆ ಮತ್ತಿತರ ದಾನಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ೧೨.೩೦ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನೃತ್ಯ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ ೫೦ ಸಾವಿರ ರೂ.ಗಳು, ದ್ವಿತೀಯ ಬಹುಮಾನ ೩೦ ಸಾವಿರ ಹಾಗು ತೃತೀಯ ೨೦ ಸಾವಿರ ರೂ.ಗಳ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ನೃತ್ಯ ತಂಡದಲ್ಲಿ ೭ಕ್ಕಿಂತ ಹೆಚ್ಚು ನೃತ್ಯ ಪಟುಗಳು ಇರಬೇಕು. ನೃತ್ಯ ತಂಡಗಳು ತಾ.೧೭ರ ಒಳಗೆ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ.೯೮೪೪೪೬೧೧೩೪, ೯೪೪೮೮೯೬೪೯೪ನ್ನು ಸಂಪರ್ಕಿಸಬಹುದು ಎಂದ ಅವರು, ಆಯುಧ ಪೂಜೋತ್ಸವ ಅಂಗವಾಗಿ ಗೂಡ್ಸ್ ಮತ್ತು ಪ್ಯಾಸೆಂಜರ್ ವಾಹನಗಳ ಅಲಂಕಾರ ಸ್ಪರ್ಧೆ ನಡೆಯಲಿದೆ. ತಾ. ೨೦ ರ ಸಂಜೆ ೩ ಗಂಟೆ ಒಳಗೆ ಸ್ಪರ್ಧಿಗಳು ಹೆಸರು ನೋಂದಾಯಿಸಿ ಟೋಕನ್ ಪಡೆದುಕೊಂಡು ಸಂಜೆ ೬ ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಲಂಕಾರ ಮಾಡಿದ ವಾಹನಗಳನ್ನು ನಿಲ್ಲಿಸಬೇಕು. ವಿಜೇತರಿಗೆ ನಗದು ಹಾಗು ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದರು.

ಸಮಾರAಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಪ್ರಗತಿಪರ ಕೃಷಿಕ ಟಿ.ಕೆ.ಯೋಗಾನಂದ, ವಾಹನ ಚಾಲಕರ ಸಂಘದ ಖಜಾಂಚಿ ಡ್ಯಾನಿ ಡೊಮಿನಿಕ್, ಆಸ್ಪತ್ರೆಯ ಡಿ.ಗ್ರೂಪ್ ನೌಕರ ಎಚ್.ಸಿ.ಮಂಜುನಾಥ್, ಮಾಜಿ ಸೈನಿಕ ಹವಾಲ್ದಾರ್ ಎನ್.ಆರ್.ಅಜಿತ್ ಕುಮಾರ್, ಪೌರಕಾರ್ಮಿಕ ಎಚ್.ಬಿ.ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಗುತ್ತದೆ ಎಂದು ಬಾಲಕೃಷ್ಣ ಅವರು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಎನ್.ರಂಗಸ್ವಾಮಿ, ಕಾರ್ಯದರ್ಶಿ ಮಣಿ ಕುಶಾಲಪ್ಪ, ಖಜಾಂಚಿ ಡ್ಯಾನಿ ಡೋಮಿನಿಕ್, ಉಪಕಾರ್ಯದರ್ಶಿ ಎಸ್.ಎಂ.ಕೃಷ್ಣ ಇದ್ದರು.