ಗೋಣಿಕೊಪ್ಪ ವರದಿ, ಅ. ೧೬: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ನವೆಂಬರ್ ೭ ರಿಂದ ನಾಲ್ಕನೇ ವರ್ಷದ ಅಂತರ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ತಿಳಿಸಿದರು.

ನವೆಂಬರ್ ೭ ರಿಂದ ನ. ೧೦ ರವರೆಗೆ ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆಸಲಾಗುತ್ತದೆ. ಮೊದಲ ವರ್ಷದ ಹಾಗೂ ಮೂರನೇ ವರ್ಷದ ಪಂದ್ಯಾವಳಿಯನ್ನು ವೀರಾಜಪೇಟೆ ಜೂನಿಯರ್ ಕಾಲೇಜಿನ ಮೈದಾನದಲ್ಲಿಯೂ, ಎರಡನೇ ವರ್ಷದ ಪಂದ್ಯಾವಳಿಯನ್ನು ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆಸಲಾಗಿತ್ತು. ಮೂರು ಪಂದ್ಯಾವಳಿಯು ದೊಡ್ಡ ಯಶಸ್ಸು ಕಂಡಿದ್ದು ಬಾಳೆಲೆಯ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆಸಲಾಗುತ್ತಿದೆ. ಸುಮಾರು ೧೪ ಕೊಡವ ಸಮಾಜದ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೊಡವ ಕ್ರಿಕೆಟ್ ಅಕಾಡೆಮಿ ಸಭೆಯಲ್ಲಿ ಮಾಹಿತಿ ನೀಡಿದರು.

ಆಟಗಾರರು ಕೊಡವ ಜನಾಂಗಕ್ಕೆ ಸೇರಿರಬೇಕು. ೨ ಆಟಗಾರರನ್ನು ಹೊರತುಪಡಿಸಿ ಉಳಿದವರು ಕೊಡಗಿನ ಕೊಡವ ನಿವಾಸಿಯಾಗಿರಬೇಕು ಮತ್ತು ಕೊಡಗಿನ ನಿವಾಸಿ ಎಂದು ಆಧಾರ್ ದಾಖಲೆ ಪ್ರತಿ ಸಲ್ಲಿಸಬೇಕು. ಪ್ರತಿ ತಂಡವು ಹೊರ ಜಿಲ್ಲೆಯ ೨ ಅತಿಥಿ ಕೊಡವ ಆಟಗಾರರನ್ನು ಸೇರಿಸಿಕೊಳ್ಳಬಹುದು. ಆದರೆ ಅವರು ಕೊಡವರಾಗಿರಬೇಕು. ಕೊಡಗಿನ ಆಟಗಾರರನ್ನು ಜಿಲ್ಲೆಯ ಯಾವುದೇ ಕೊಡವ ಸಮಾಜಕ್ಕೆ ಬೇಕಾದರೂ ಆಡಿಸಬಹುದು ಎಂದು ತಿಳಿಸಿದರು.

ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಉತ್ತೇಜನವಿದ್ದು, ಜಿಲ್ಲೆಯಲ್ಲಿ ಬಹಳಷ್ಟು ಕಿರಿಯ ಪ್ರತಿಭಾವಂತ ಆಟಗಾರರು ಇದ್ದು ಇವರಿಗೆ ಉತ್ತೇಜನ ಕೊಡುವುದು ಕೊಡವ ಕ್ರಿಕೆಟ್ ಅಕಾಡೆಮಿಯ ಉದ್ದೇಶವಾಗಿದೆ. ಈಗಾಗಲೇ ಮೂರು ಪಂದ್ಯಾವಳಿಯಲ್ಲಿ ಬಹಳಷ್ಟು ಪ್ರತಿಭೆಗಳು ಹೊರಬಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ತಂಡದಲ್ಲೂ ರಾಷ್ಟ್ರದ ತಂಡದಲ್ಲೂ ಕೊಡಗಿನ ಆಟಗಾರರು ಆಡಬೇಕೆಂಬುದು ಕೊಡವ ಕ್ರಿಕೆಟ್ ಅಕಾಡೆಮಿ ಆಶಯವಾಗಿದೆ. ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದರು. ಈ ಸಂದರ್ಭ ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್, ಖಜಾಂಚಿ ಕೊಕ್ಕೇಂಗಡ ರಂಜನ್, ನಿರ್ದೇಶಕರುಗಳಾದ ಮಾಚಂಗಡ ಸೋಮಣ್ಣ, ಕೊಟ್ಟಂಗಡ ಸೂರಜ್, ಚೆಕ್ಕೆರ ಚಂದ್ರಪ್ರಕಾಶ್, ಬಾಳೆಯಡ ಪ್ರತೀಶ್, ಅವರೆಮಾದಂಡ ಶರಣ್ ಪೂಣಚ್ಚ, ಕೀತಿಯಂಡ ವಿವೇಕ್, ಚೌರಿರ ಶರತ್, ಪಟ್ಟಡ ಪ್ರಕಾಶ್ ಇದ್ದರು.