ಕುಶಾಲನಗರ, ಅ. ೧೬: ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಕಂಬಳದಲ್ಲಿ ಪಾಲ್ಗೊಳ್ಳಲು ಪುತ್ತೂರು ಭಾಗದಿಂದ ೧೫೦ಕ್ಕೂ ಅಧಿಕ ಜೋಡಿ ಕಂಬಳದ ಕೋಣಗಳು ತಾ. ೧೭ ರಂದು (ಇಂದು) ಕುಶಾಲನಗರದ ಮೂಲಕ ಮೈಸೂರಿಗೆ ತೆರಳಲಿವೆ.

ಮಧ್ಯಾಹ್ನ ೧೨ ಗಂಟೆಗೆ ಮಡಿಕೇರಿ ಮಾರ್ಗವಾಗಿ ಕುಶಾಲನಗರ ತಲುಪಲಿರುವ ಕೋಣಗಳು ಹಾಗೂ ತಂಡದ ಸದಸ್ಯರನ್ನು ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಬರಮಾಡಿಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ತಿಳಿಸಿದ್ದಾರೆ.

ಮೈದಾನದಲ್ಲಿ ಕೋಣಗಳು ಹಾಗೂ ತಂಡದ ಸದಸ್ಯರಿಗೆ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಕೋಣಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು, ಕೋಣಗಳ ಮಾಲೀಕರು, ಸಹಾಯಕರು ಸೇರಿದಂತೆ ಅಂದಾಜು ೨,೦೦೦ಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸೇರಿದಂತೆ ಗಣ್ಯರು ಕಂಬಳದ ಕೋಣಗಳನ್ನು ಸ್ವಾಗತಿಸಿ, ಉಪಚರಿಸಿ ಮೈಸೂರಿಗೆ ಬೀಳ್ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.