ಮಡಿಕೇರಿ, ಅ. ೧೬: ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿ ಕ್ಷೇತ್ರ ಪ್ರಸಕ್ತ ವರ್ಷದ ತುಲಾ ಸಂಕ್ರಮಣ ಜಾತ್ರೆಯೊಂದಿಗೆ ಪವಿತ್ರ ತೀರ್ಥೋದ್ಭವ ಕಾರ್ಯಕ್ಕೆ ಸಜ್ಜುಗೊಂಡಿದೆ.

ತಾ. ೧೭ ರ ಶನಿವಾರ ಸಂಜೆ ೭.೫೦ ರ ಮೇಷಲಗ್ನದಲ್ಲಿ ಈ ಬಾರಿಯ ತೀರ್ಥೋದ್ಭವಕ್ಕೆ ಸಮಯ ನಿಗದಿಯಾಗಿದೆ. ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ದಸರಾ ಕಾರ್ಯಕ್ರಮಗಳು ಜರುಗುತ್ತಿದ್ದು, ದಸರಾ ಗುಂಗಿನ ನಡುವೆ ಪವಿತ್ರ ತೀರ್ಥೋದ್ಭವಕ್ಕೆ ಭಕ್ತರು ಭಾವಪರವಶತೆಯಿಂದ ಕಾಯುತ್ತಿದ್ದಾರೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತೀರ್ಥೋದ್ಭವದ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಭಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ಕಾವೇರಿ ಸನ್ನಿಧಾನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.

ವಿದ್ಯುತ್ - ಹೂವಿನ ಅಲಂಕಾರದೊAದಿಗೆ ಪುಣ್ಯಕ್ಷೇತ್ರಗಳು ಕಂಗೊಳಿಸುತ್ತಿವೆ. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನದೊಂದಿಗೆ ಧಾರ್ಮಿಕ ಕಾರ್ಯಕ್ಕೂ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಬಂದೋಬಸ್ತ್ಗಾಗಿ ಪೊಲೀಸ್ ಇಲಾಖೆ ಅಗತ್ಯ ಮುಂಜಾಗರೂಕತಾ ಕ್ರಮ ಅನುಸರಿಸುತ್ತಿದೆ. ವಾಹನ ನಿಲುಗಡೆ, ಭಾಗಮಂಡಲದಿAದ ತಲಕಾವೇರಿಗೆ ವಾಹನ ಸಂಚಾರ, ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ವ್ಯವಸ್ಥೆ, ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಮೇಲುಸ್ತುವಾರಿಯೂ ನಡೆದಿದೆ.

ಈ ಬಾರಿ ವಿಶೇಷವಾಗಿ ಭಾಗಮಂಡಲ - ತಲಕಾವೇರಿ ವ್ಯವಸ್ಥಾಪನಾ ಸಮಿತಿಯೂ ರಚನೆಗೊಂಡಿದ್ದು ನೂತನ ಅಧ್ಯಕ್ಷ ಬಿ.ಎನ್. ಪ್ರಥ್ಯು ಹಾಗೂ ಸಮಿತಿ ಸದಸ್ಯರೂ ಕೈಜೋಡಿಸುತ್ತಿದ್ದಾರೆ.