ಗೋಣಿಕೊಪ್ಪಲು, ಅ.೧೬: ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ೪೮ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ಗೋಣಿಕೊಪ್ಪಲಿನಲ್ಲಿ ನಡೆಯಿತು.

ವರುಣನ ಅಬ್ಬರದ ಹಿನ್ನೆಲೆಯಲ್ಲಿ ಕಾವೇರಿ ಕಲಾ ವೇದಿಕೆಯ ಬದಲಾಗಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪಿಸಲಾಗಿರುವ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಕವಿಗೋಷ್ಠಿ ಆಯೋಜಿಸಲಾಗಿತ್ತು. ಹೊರಗೆ ಮಳೆ ಸುರಿಯುತ್ತಿದ್ದರೂ, ಕವಿಗಳು ತಮ್ಮ ಭಾವನೆಗಳು, ಸಾಮಾಜಿಕ ಸಮಸ್ಯೆಗಳು ಹಾಗೂ ಸಮಾಜದ ಓರೆಕೋರೆಗಳನ್ನು ಕಾವ್ಯದ ಮೂಲಕ ತೆರೆದಿಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ, ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಡೆದ ಕವಿಗೋಷ್ಠಿಯಲ್ಲಿ ೧೦೨ ಕವಿಗಳು ಕವನ ವಾಚನ ಮಾಡಿದರು. ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಯರವ, ಕುಂಬಾರ, ಹಿಂದಿ, ತಮಿಳು, ಮಲಯಾಳಂ, ಮರಾಠಿ, ಕುಂದಾಪುರ ಕನ್ನಡ ಹಾಗೂ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಕ್ಕಳಿಗೂ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕವನ ವಾಚನಕ್ಕೆ ವಿಶೇಷ ವೇದಿಕೆ ಕಲ್ಪಿಸಲಾಗಿತ್ತು. ಬೆಂಗಳೂರು, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಮೈಸೂರು, ಕುಂದಾಪುರ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕವಿಗಳು ಆಗಮಿಸಿದ್ದರು.

ಕವಿಗೋಷ್ಠಿಗೆ ಆಗಮಿಸಿದ ಎಲ್ಲ ಕವಿಗಳಿಗೂ ಗೌರವ ಸಂಭಾವನೆಯೊAದಿಗೆ ಕೊಡಗಿನ ಲೇಖಕರ ಪುಸ್ತಕವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ‘ಪಾವೆ (ನೆರಳು)’ ಎಂಬ ಯರವ ಕವನ ಸಂಕಲನವನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ಹಾಗೂ ಸಾಹಿತಿ ವಿಜಯ ವಿಷ್ಣುಭಟ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಾಹಿತಿ ಕೃಪಾದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ವಿಜಯ ವಿಷ್ಣುಭಟ್, ಜೆನ್‌ಜಿ ಪೀಳಿಗೆ ಡಿಜಿಟಲ್ ಯುಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳ ನಡುವೆ ಬೆಳೆದ ಮೊದಲ ತಲೆಮಾರಿನವರಾಗಿರುವ ಅವರು ತಂತ್ರಜ್ಞಾನವನ್ನು ಸುಲಭವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೊಸ ಬದಲಾವಣೆಗಳಿಗೆ ವೇಗವಾಗಿ ಹೊಂದಿಕೊಳ್ಳುವುದರ ಜೊತೆಗೆ ಮುಕ್ತ ಮನೋಭಾವವನ್ನೂ ಹೊಂದಿದ್ದಾರೆ. ಇದೀಗ ಜೆನ್‌ಜಿ ಪೀಳಿಗೆಯ ಯುಗವಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಕನ್ನಡ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ್ ಕಾಮತ್ ಮಾತನಾಡಿ, ಹಲವು ವರ್ಷಗಳಿಂದ ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ ಉತ್ತಮ ರೀತಿಯಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ನಿರೀಕ್ಷೆಗೂ ಮೀರಿ ಕವಿಗಳು ಕವನ ವಾಚನಕ್ಕೆ ಆಗಮಿಸಿರುವುದು ಶ್ಲಾಘನೀಯ ಎಂದರು.

ಭಾವನೆಗಳು ಅಕ್ಷರ ರೂಪ ಪಡೆದು, ಪ್ರಾಸಬದ್ಧ ರಚನೆಯಾಗಿ ಅದನ್ನು ಪ್ರಸ್ತುತಪಡಿಸಿದಾಗ ಕವಿತೆಯಾಗುತ್ತದೆ. ಆದರೆ ಕೇವಲ ಪ್ರಾಸವಿದ್ದರೆ ಮಾತ್ರ ಕವನವಾಗುವುದಿಲ್ಲ. ಕವಿಯ ಮನದಾಳದ ಭಾವನೆಗಳು ಓದುಗರ ಅಥವಾ ಕೇಳುಗರ ಮನಸ್ಸಿಗೆ ಅದೇ ಅರ್ಥದಲ್ಲಿ ತಲುಪಬೇಕೆಂದೇನಿಲ್ಲ. ಕಾವ್ಯದಲ್ಲಿ ಭಾವನೆ ಮತ್ತು ಅಭಿವ್ಯಕ್ತಿಗೆ ಮಹತ್ವವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ದಸರಾ ಕವಿಗೋಷ್ಠಿಯ ಸಂಚಾಲಕಿ ಎಸ್.ಎಂ. ರಜನಿ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಕಾವೇರಿ ದಸರಾ ಸಮಿತಿಯ ಸಂಯೋಜಕ ಎಂ.ಕೆ. ಚಂದನ್ ಕಾಮತ್, ಸಾಹಿತಿ ಹಾಗೂ ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮನೆಯಪಂಡ ಶೀಲಾ ಬೋಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಹಿತಿ ಜೆ. ಸೋಮಣ್ಣ, ಶ್ರೀ ಕಾವೇರಿ ದಸರಾ ಸಮಿತಿಯ ಉಪಾಧ್ಯಕ್ಷ ನಾಯಂದಿರ ಶಿವಾಜಿ, ಕಾರ್ಯದರ್ಶಿ ವರಲಕ್ಷ್ಮಿ, ಸಂಚಾಲಕ ಬಿ.ಎನ್. ಪ್ರಕಾಶ್, ದಸರಾ ಸಮಿತಿಯ ಪದಾಧಿಕಾರಿಗಳಾದ ಕರ್ಣರಾಜ್ ತಂಬಿ, ವಾಮನ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಮನೆಯಪಂಡ ಶೀಲಾ ಬೋಪಣ್ಣ ಸ್ವಾಗತಿಸಿದರು. ಪುತ್ತಾಮನೆ ವಿದ್ಯಾ ಜಗದೀಶ್ ಹಾಗೂ ಸುಸ್ಮಿತ ನಿರೂಪಿಸಿದರು. ಡಿ. ಚಂದನ ಮಂಜುನಾಥ್ ವಂದಿಸಿದರು.