ವೀರಾಜಪೇಟೆ, ಅ. ೧೫: ನಾಡಿನಾದ್ಯಂತ ಶರನ್ನವರಾತ್ರಿಯ ಸಂಭ್ರಮ ಮುಗಿಲು ಮುಟ್ಟಿದೆ. ಮೈಸೂರಿನ ದಸರಾ ವೈಭವ ಒಂದೆಡೆಯಾದರೆ, ಕೊಡಗಿನ ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದ ಹಾಗೆ ವೀರಾಜಪೇಟೆಯಲ್ಲಿ ದಸರಾದ ಸಾಂಪ್ರದಾಯಿಕ ಕಳೆ ಮತ್ತು ಸಾಂಸ್ಕöÈತಿಕ ಮೆರುಗು ಕಂಗೊಳಿಸುತ್ತಿದೆ.
ಈ ಹಬ್ಬದ ಪಾವನ ಸಂದರ್ಭದಲ್ಲಿ, ವೀರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞರಾದ ಡಾ. ಎಸ್.ವಿ. ನರಸಿಂಹನ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿರುವ ದಸರಾ ಬೊಂಬೆ ಪ್ರದರ್ಶನವು ಗಮನ ಸೆಳೆಯುತ್ತಿದೆ.
ನವರಾತ್ರಿಯ ಸಾಂಪ್ರದಾಯಿಕ ಅಂಗವಾದ ಬೊಂಬೆ ಹಬ್ಬ (ಗೊಲು) ನಮ್ಮ ಪ್ರಾಚೀನ ಕಲೆ, ನಂಬಿಕೆ, ಸಂಸ್ಕöÈತಿ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸುವ ಶ್ರೇಷ್ಠ ಪರಂಪರೆಯಾಗಿದೆ. ಈ ಸುಂದರ ಸಂಪ್ರದಾಯವನ್ನು ಡಾ. ನರಸಿಂಹನ್ ಹಾಗೂ ಅವರ ಪತ್ನಿ ಪುಷ್ಪ ನರಸಿಂಹನ್ ದಂಪತಿ ಅತ್ಯಂತ ಶ್ರದ್ಧೆ, ಪ್ರೀತಿ ಮತ್ತು ಕಲಾತ್ಮಕತೆಯಿಂದ ದಶಕಗಳಿಂದಲೂ ಪೋಷಿಸಿಕೊಂಡು ಬರುತ್ತಿದ್ದಾರೆ.
ಏಳು ಅಂತಸ್ತುಗಳಲ್ಲಿ ಮೂಡಿದ ಅಪರೂಪದ ಬೊಂಬೆಗಳ ಪ್ರಪಂಚ ಡಾ. ನರಸಿಂಹನ್ ಅವರ ಮನೆಯಲ್ಲಿ ಪೂರ್ವಜರ ಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿರುವ ಅಪರೂಪದ ಗೊಂಬೆಗಳನ್ನು ಅತ್ಯಂತ ಶ್ರದ್ಧೆಯಿಂದ ಕಾಯ್ದಿಕೊಳ್ಳಲಾಗಿದೆ. ಪ್ರಸಕ್ತ ವರ್ಷ ಒಟ್ಟು ಏಳು ಅಂತಸ್ತುಗಳಲ್ಲಿ (ಪಡಿಗಳು) ಅತ್ಯಂತ ಆಕರ್ಷಕ ಹಾಗೂ ಶಿಸ್ತುಬದ್ಧವಾಗಿ ಗೊಂಬೆಗಳನ್ನು ಜೋಡಿಸಲಾಗಿದೆ.
ಪೌರಾಣಿಕ ವೈಭವ: ರಾಜಾರಾಣಿ, ಅಷ್ಟಲಕ್ಷಿ÷್ಮಯರು, ದಶಾವತಾರ ಮೂರ್ತಿಗಳು, ಸಂಪೂರ್ಣ ರಾಮಾಯಣ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಸನ್ನಿವೇಶಗಳು ಹಾಗೂ ಕೃಷ್ಣನ ರಾಸಲೀಲೆಯ ಸುಂದರ ದೃಶ್ಯಗಳು ವೀಕ್ಷಕರನ್ನು ದೇವಲೋಕಕ್ಕೇ ಕರೆದೊಯ್ಯುತ್ತವೆ.
ಆಕರ್ಷಕ ನಿಸರ್ಗ ಮತ್ತು ವಿದೇಶಿ ಸಂಸ್ಕöÈತಿ
ಪಕ್ಷಿ ತಜ್ಞರಾಗಿರುವ ಡಾ. ನರಸಿಂಹನ್ ಅವರ ನಿಸರ್ಗ ಪ್ರೇಮಕ್ಕೆ ತಕ್ಕಂತೆ ವಿವಿಧ ಪ್ರಾಣಿ - ಪಕ್ಷಿಗಳ ಗೊಂಬೆಗಳು ಇಲ್ಲಿ ಶೋಭಿಸುತ್ತಿವೆ. ಇದರ ಜೊತೆಗೆ ಶ್ರೀಲಂಕಾ, ದುಬೈ ಸೇರಿದಂತೆ ವಿವಿಧ ದೇಶಗಳ ವಿಶಿಷ್ಟ ಸಾಂಸ್ಕöÈತಿಕ ಪರಂಪರೆಯನ್ನು ಬಿಂಬಿಸುವ ಗೊಂಬೆಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿವೆ.
ನವರಾತ್ರಿಯ ಪ್ರದರ್ಶನದಲ್ಲಿ ಈ ಬಾರಿ ಉತ್ತರಾಖಂಡದ ಪವಿತ್ರ ಗಂಗೋತ್ರಿ ಕ್ಷೇತ್ರ ಹಾಗೂ ನಾಲ್ಕು ಪ್ರಮುಖ ಧಾರ್ಮಿಕ ಸಂಗಮಗಳನ್ನು ಅತ್ಯಂತ ಸುಂದರವಾಗಿ ಬಿಂಬಿಸುವ ಗೊಂಬೆಗಳ ಮಾದರಿಯನ್ನು ವಿಶೇಷವಾಗಿ ರೂಪಿಸಿ ಇಡಲಾಗಿದೆ.
ಪ್ರಕೃತಿ ಪ್ರೇಮ ಮತ್ತು ಸಂಸ್ಕöÈತಿಯ ಅನನ್ಯ ಸಂಗಮ
ಈ ಬೊಂಬೆ ಹಬ್ಬವೂ ನಮ್ಮ ಇತಿಹಾಸ, ಸಂಸ್ಕöÈತಿ ಮತ್ತು ಮಾನವೀಯ ಮೌಲ್ಯಗಳನ್ನು ಒಂದೆಡೆ ತರುತ್ತದೆ. ನಮ್ಮ ಪೂರ್ವಜರ ಕಾಲದಿಂದಲೂ ಬಂದ ಈ ಬೊಂಬೆಗಳನ್ನು ಕಾಪಾಡಿಕೊಂಡು ಬರುವುದು ಮತ್ತು ಪ್ರಕೃತಿಯ ಒಡನಾಟದ ಜೊತೆಗೆ ಧಾರ್ಮಿಕ ಸಂಗಮಗಳನ್ನು ಯುವಜನತೆಗೆ ಪರಿಚಯಿಸುವುದು ನಮಗೆ ಸಿಕ್ಕ ದೊಡ್ಡ ಅವಕಾಶ ಎನ್ನುತ್ತಾರೆ ಡಾ. ಎಸ್.ವಿ. ನರಸಿಂಹನ್, ಮನಸೋಲಿಸುವ ಗೃಹಾಲಂಕಾರ ಮತ್ತು ಗೃಹಿಣಿಯ ಶ್ರದ್ಧೆ. ಏಳು ಅಂತಸ್ತುಗಳಲ್ಲಿ ಪ್ರತಿಯೊಂದು ಗೊಂಬೆಯನ್ನು ಶ್ರದ್ಧೆಯಿಂದ ವಿನ್ಯಾಸಗೊಳಿಸಿ ಮನೆಗೆ ಹಬ್ಬದ ಕಳೆ ತರುವಲ್ಲಿ ಡಾ. ನರಸಿಂಹನ್ ಅವರ ಪತ್ನಿ ಪುಷ್ಪ ನರಸಿಂಹನ್ ಅವರ ಕಲಾತ್ಮಕ ಶ್ರಮ ಅಪಾರವಾದದ್ದು.
"ಪೂರ್ವಜರ ಕಾಲದ ಬೊಂಬೆಗಳನ್ನು ಜತನವಾಗಿ ಕಾಯ್ದುಕೊಂಡು, ಪ್ರತಿವರ್ಷ ನವರಾತ್ರಿ ಬಂದಾಗ ಹೊಸ ವಿಷಯಗಳೊಂದಿಗೆ ಜೋಡಿಸುವುದು ನಮಗೆ ಅತ್ಯಂತ ಸಂತೋಷ ತರುತ್ತದೆ. ಈ ಬಾರಿ ಗಂಗೋತ್ರಿ ಹಾಗೂ ಸಂಗಮಗಳ ದೃಶ್ಯದ ಜೊತೆಗೆ ದೇಶ - ವಿದೇಶಗಳ ಗೊಂಬೆಗಳನ್ನು ಇಟ್ಟಿದ್ದೇವೆ. ಮನೆಗೆ ಬರುವ ಅತಿಥಿಗಳು, ಮಕ್ಕಳು ಹಾಗೂ ಕಲಾಪ್ರೇಮಿಗಳು ಇದನ್ನು ನೋಡಿ ಆನಂದಿಸುವುದೇ ನಮ್ಮ ಹಬ್ಬದ ಸಾರ್ಥಕತೆ ಎನ್ನುತ್ತಾರೆ ಪುಷ್ಪ ನರಸಿಂಹನ್.
ವೀರಾಜಪೇಟೆಗೆ ತಂದಿತ್ತ ಸಾಂಸ್ಕöÈತಿಕ ಹಿರಿಮೆ
ನವರಾತ್ರಿಯ ಈ ಪಾವನ ದಿನಗಳಲ್ಲಿ ವೀರಾಜಪೇಟೆ ಸೇರಿದಂತೆ ಕೊಡಗಿನ ವಿವಿಧ ಭಾಗಗಳಿಂದ ಹಿತೈಷಿಗಳು, ಸಾಹಿತಿಗಳು, ಸಾರ್ವಜನಿಕರು ಹಾಗೂ ಮಕ್ಕಳು ಡಾ. ನರಸಿಂಹನ್ ಅವರ ನಿವಾಸಕ್ಕೆ ಭೇಟಿ ನೀಡಿ ಈ ವರ್ಣರಂಜಿತ ಏಳು ಅಂತಸ್ತುಗಳ ಬೊಂಬೆಗಳ ಜಗತ್ತನ್ನು ಕಣ್ಣುತುಂಬಿಕೊಳ್ಳುತ್ತಿದ್ದಾರೆ. ಆಧುನಿಕತೆಯ ಅಲೆಯಲ್ಲೂ ನಮ್ಮತನವನ್ನು ಬಿಟ್ಟುಕೊಡದೆ, ಸಾಂಪ್ರದಾಯಿಕ ದಸರಾ ಗೊಂಬೆ ಹಬ್ಬದ ಮೆರುಗನ್ನು ಜೀವಂತವಾಗಿರಿಸಿರುವ ನರಸಿಂಹನ್ ದಂಪತಿಯ ಈ ಕಲಾತ್ಮಕ ಶ್ರದ್ಧೆ ನಾಡಿಗೆ ಮಾದರಿಯಾಗಿದೆ.
-ಈಶಾನ್ವಿ