ಮಡಿಕೇರಿ, ಅ. ೧೫: ಮಡಿಕೇರಿ ದಸರಾ ಸಂಭ್ರಮದ ನಡುವೆ ಮೊಳಗಿದ ಕವಿಗಳ ಕಂಠ, ಭಾವನೆಗಳಿಗೆ ಪದಗಳ ರೂಪ ನೀಡಿ, ಉತ್ಸವದ ವಾತಾವರಣಕ್ಕೆ ಕಾವ್ಯದ ಕಂಪನ್ನು ಬೆರೆಸಿತು.
ಐತಿಹಾಸಿಕ ಮಡಿಕೇರಿ ದಸರಾ ಸಂಭ್ರಮಕ್ಕೆ ಚಾಲನೆ ದೊರೆತಿದ್ದು, ನಗರದಾದ್ಯಂತ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಸ್ಪರ್ಧೆಗಳು ಕಳೆಗಟ್ಟಿವೆ. ಇದರೊಂದಿಗೆ ಆಯೋಜಿಸಲಾದ ಕವಿಗೋಷ್ಠಿ ಸಾಹಿತ್ಯಾಸಕ್ತರ ಗಮನ ಸೆಳೆಯಿತು. ಕವಿಗಳು ತಮ್ಮದೇ ಆದ ವಿಭಿನ್ನ ಅನುಭವ, ಭಾವನೆ ಮತ್ತು ಕಲ್ಪನೆಗಳನ್ನು ಕವನಗಳ ಮೂಲಕ ಅಭಿವ್ಯಕ್ತಪಡಿಸಿ, ದಸರಾ ವೈಭವಕ್ಕೆ ಮತ್ತಷ್ಟು ಮುದ ನೀಡಿದರು.
ನಾಡು-ನುಡಿ, ಪ್ರಕೃತಿ, ಕೊಡಗಿನ ಸಂಸ್ಕೃತಿ, ಸಾಮಾಜಿಕ ಬದುಕು, ಮಾನವೀಯ ಸಂಬAಧಗಳು ಸೇರಿದಂತೆ ಹಲವು ವಿಚಾರಗಳು ಕವಿತೆಗಳಲ್ಲಿ ಅನಾವರಣಗೊಂಡವು. ಕೆಲ ಕವನಗಳು ನಗೆಯ ಹೊನಲು ಹರಿಸಿದರೆ, ಮತ್ತೆ ಕೆಲವು ಬದುಕಿನ ವಾಸ್ತವತೆಗಳನ್ನು ತೆರೆದಿಟ್ಟವು. ಭಾವನಾತ್ಮಕ ಕವಿತೆಗಳು ಸಭಿಕರನ್ನು ಮೌನಗೊಳಿಸಿದರೆ, ಚಿಂತನಶೀಲ ಸಾಲುಗಳು ಆಲೋಚನೆಗೆ ಹಚ್ಚಿದವು. ಹಾಗೆಯೇ ಮಕ್ಕಳು ವಾಚಿಸಿದ ವಿವಿಧ ಕವನಗಳು ಕೂಡ ಗಮನ ಸೆಳೆದವು.
ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಗರದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿ ನಡೆಯಿತು. ವಿವಿಧ ಭಾಷೆಯ ಒಟ್ಟು ೮೦ ಕವನಗಳು ಗೋಷ್ಠಿಯಲ್ಲಿ ವಾಚನಗೊಂಡವು.
ಕನ್ನಡ ವಿಭಾಗದಲ್ಲಿ ೩೦, ಕೊಡವ ಭಾಷೆಯಲ್ಲಿ ೪, ಅರೆಭಾಷೆಯ ೫, ಕನ್ನಡ ಚುಟುಕು ೨, ಮಕ್ಕಳ ಕವನಗಳು ೧೪, ತುಳು ಭಾಷೆಯ ೫, ಮಲಯಾಳಂನ ೨, ಕುಂಬಾರ ಭಾಷೆಯ ೨, ಹವ್ಯಕ ಭಾಷೆಯ ೨, ಹಿಂದಿ ಭಾಷೆಯ ೪, ಕೊಂಕಣಿಯ ೨, ಕುಂದಾಪುರ ಕನ್ನಡ, ಇಂಗ್ಲೀಷ್, ಉರ್ದು, ತೆಲುಗು, ಕನ್ನಡ ಗಝಲ್, ಜೇನು ಕುರುಬ, ಮರಾಠಿ, ಬ್ಯಾರಿ ಭಾಷೆಯ ತಲಾ ೧ ಕವನಗಳು ವಾಚನಗೊಂಡವು.
ಸಭಾ ಕಾರ್ಯಕ್ರಮ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್ ಕವಿಗೋಷ್ಠಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೊಡಗು ಕೇವಲ ಒಂದು ಭಾಷೆ ಅಥವಾ ಸಂಸ್ಕೃತಿಗೆ ಸೀಮಿತವಾದ ಜಿಲ್ಲೆಯಲ್ಲ. ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ಒಳಗೊಂಡಿರುವ ನಾಡಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾಹಿತ್ಯ ಕೃಷಿ ಅತ್ಯಂತ ಅಗತ್ಯವಾಗಿದೆ. ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅವಶ್ಯಕವಾಗಿದ್ದು, ಕೊಡಗಿನ ವಿಶಿಷ್ಟ ಸಂಸ್ಕೃತಿ ಉಳಿದು ಮುಂದಿನ ಪೀಳಿಗೆಗೆ ವರ್ಗಾವಣೆಯಾಗಲು ಸಾಹಿತಿಗಳಿಂದ ಮಹತ್ವದ ಕೊಡುಗೆ ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಯಾವುದೇ ವಸ್ತು ಕವನದ ರೂಪ ಪಡೆದಾಗ ಅದು ಕವಿಯ ಮನಸ್ಥಿತಿಗೆ ಅನುಗುಣವಾಗಿ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಕವನಗಳು ಆಯಾಮವನ್ನೇ ಬದಲಿಸುವ ಶಕ್ತಿಯನ್ನು ಹೊಂದಿವೆ ಎಂದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ದಸರಾ ಕೇವಲ ಹಬ್ಬವಲ್ಲ; ಅದು ಭಕ್ತಿ, ಪರಂಪರೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ. ಕೊಡಗು ತನ್ನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹಾಗೂ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ದಸರಾ ಉತ್ಸವದಲ್ಲಿ ಕಾವ್ಯ ಹಾಗೂ ಕವಿತೆಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ಕಾವ್ಯ ಕೇವಲ ಪದಗಳ ಸಮೂಹವಲ್ಲ; ಅದು ಸಮಾಜದ ಪ್ರತಿಬಿಂಬ. ಸಾವಿರ ಮಾತುಗಳಿಂದ ಮಾಡಲಾಗದ ಕೆಲಸವನ್ನು ಕೆಲವೊಮ್ಮೆ ಒಂದು ಕಾವ್ಯ ಮಾಡಬಲ್ಲದು ಎಂದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ನಾಣಯ್ಯ ಮಾತನಾಡಿ, ಕವನ ರಚನೆಗೆ ಭಾವನೆಗಳು ಬಹಳ ಮುಖ್ಯ. ಮನಸ್ಸಿನ ಭಾವನೆಗಳನ್ನು ಅಕ್ಷರಗಳ ಮೂಲಕ ಅಭಿವ್ಯಕ್ತಿಪಡಿಸುವುದೇ ಕವನದ ಸೊಗಸು ಎಂದರು.
ಮೈಸೂರಿನ ಲಕ್ಷಿö್ಮÃಪುರಂ ಸರಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಕೆ.ಎಲ್. ರೋಹಿಣಿ ಮಾತನಾಡಿ, ಸುಸ್ಥಿರ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ ಮತ್ತು ಕವಿಗೋಷ್ಠಿಗಳ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಹಾಗೂ ವಿಜ್ಞಾನ ಎಷ್ಟೇ ಮುಂದುವರಿದರೂ ಸಮಾಜಕ್ಕೆ ಸಾಹಿತ್ಯದ ಅಗತ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಸಾಹಿತ್ಯಕ್ಕೆ ಸಾವಿಲ್ಲ; ಅದು ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ಕೊಡಗಿನ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವೈಜ್ಞಾನಿಕವಾಗಿ ಕೈಗೊಳ್ಳಲಾಗುತ್ತಿರುವ ಸಿ ಮತ್ತು ಡಿ ಭೂಮಿ ಸೇರಿದಂತೆ ವಿವಿಧ ಕಾನೂನು ಹಾಗೂ ಪರಿಸರ ಸಂಬAಧಿತ ಕ್ರಮಗಳಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ. ಕಸ್ತೂರಿರಂಗನ್ ವರದಿ ಸೇರಿದಂತೆ ಹಲವು ವಿಚಾರಗಳಲ್ಲಿ ಕೊಡಗಿನ ಜನರ ಹಿತಾಸಕ್ತಿಯನ್ನು ಪರಿಗಣಿಸಬೇಕಿದೆ ಎಂದರು.
ಮಡಿಕೇರಿ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ಮಡಿಕೇರಿ ದಶಮಂಟಪಗಳ ಶೋಭಾಯಾತ್ರೆ ವೀಕ್ಷಿಸಲು ರಾಜ್ಯದ ವಿವಿಧೆಡೆಗಳಿಂದ ಜನರು ಆಗಮಿಸುತ್ತಾರೆ. ದಸರಾ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದು, ಕಾಲಕ್ರಮೇಣ ವಿವಿಧ ವಿಭಾಗಗಳನ್ನು ಸೇರ್ಪಡೆಗೊಳಿಸಿ ವಿಸ್ತರಿಸಲಾಗಿದೆ. ಸರ್ಕಾರದಿಂದ ಮೊದಲ ಬಾರಿಗೆ ರೂ.೧೦ ಲಕ್ಷ ಅನುದಾನ ದೊರೆತಿತ್ತು. ಒಂದು ವರ್ಷ ಸರ್ಕಾರದಿಂದ ಅನುದಾನ ಬಾರದಿದ್ದರೂ ದಸರಾ ಆಚರಣೆ ನಿಂತಿರಲಿಲ್ಲ. ಇದೀಗ ರೂ.೨ ಕೋಟಿ ಅನುದಾನ ದೊರೆತಿದ್ದು, ದಸರಾ ಉತ್ಸವವನ್ನು ಮತ್ತಷ್ಟು ಆಕರ್ಷಕವಾಗಿ ರೂಪಿಸುವ ಅಗತ್ಯವಿದೆ. ಬೆಳಕಿನ ವ್ಯವಸ್ಥೆ ಕಳಪೆಯಾಗಿದ್ದು, ಅದನ್ನು ಸುಧಾರಿಸಬೇಕು. ದಸರಾವನ್ನು ಸರ್ಕಾರದ ಬಜೆಟ್ನಲ್ಲಿ ಶಾಶ್ವತವಾಗಿ ಸೇರಿಸುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭ ಕವಿಗಳು ವಾಚಿಸಿದ ಕವನಗಳ ಸಂಕಲ ‘ಭಾವಬಿಂದು’ವನ್ನು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ, ಲೇಖಕ, ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಹಿಂದಿ ವಿಭಾಗದ ಮುಖ್ಯಸ್ಥ, ಕೊಡಗು ವಿಶ್ವವಿದ್ಯಾನಿಲಯ ವಿಶೇಷಾಧಿಕಾರಿ ಪ್ರೊ. ಡಾ. ಶ್ರೀಧರ್ ಹೆಗ್ಗಡೆ ಬಿಡುಗಡೆಗೊಳಿಸಿದರು.
ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಸಬಿತಾ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಂಜಿತ್ ಕವಲಪಾರ ಸ್ವಾಗತಿಸಿ, ಅನಿತಾ ದೇವಯ್ಯ, ಜಷ್ಮಿ ಕಲ್ಲುಮುಟ್ಲು ನಿರೂಪಿಸಿ, ಉಜ್ವಲ್ ರಂಜಿತ್ ವಂದಿಸಿದರು.