ಮಡಿಕೇರಿ, ಅ. ೧೫: ಎಸ್.ಐ.ಆರ್ ಪ್ರಕ್ರಿಯೆ ದುರುಪಯೋಗಿಸಿ ಮತಗಳ್ಳತನ ಯತ್ನ ಆರೋಪ ಹೊತ್ತಿರುವ ಕೇಂದ್ರ ಸರಕಾರ, ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ‘ಬೇಡವೇ ಬೇಡ ಎಸ್.ಐ.ಆರ್’, ‘ಜನಗಳ ವಿಭಜಿಸಿದ ಎಸ್.ಐ.ಆರ್’, ‘ಅರ್ಹರ ತೊಲಗಿಸುವ ಎಸ್.ಐ.ಆರ್’, ‘ಸಂವಿಧಾನ ವಿರೋಧಿ ಎಸ್.ಐ.ಆರ್’, ‘ಕಳ್ಳರ ಗೆಲ್ಲಿಸುವ ಎಸ್.ಐ.ಆರ್’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ಮೂಲಕ ಸಾಗಿ ಡಿಸಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಸದಸ್ಯ ಹಾಗೂ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್, ದೇಶದ ಭಾವೈಕ್ಯತೆ, ಸಮಾನತೆಗೆ ಧಕ್ಕೆ ಆಗುವಂತ ಅಪಾಯ ಇಂದು ಇದೆ. ಇದನ್ನು ತಪ್ಪಿಸುವ ಜವಾಬ್ದಾರಿ ನಮಗಿದೆ.
ಎಸ್.ಐ.ಆರ್ ಮೂಲಕ ಅರ್ಹರ ಮತಗಳನ್ನು ಕಸಿಯುವ ಯತ್ನವನ್ನು ಬಿ.ಜೆ.ಪಿ ಇಂದು ನಡೆಸಲೆತ್ನಿಸಿದ್ದು, ಜನರು ಇವತ್ತು ಇದನ್ನು ಪ್ರಶ್ನಿಸಿ ಬೀದಿಗೆ ಇಳಿದಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸರಕಾರದ ಎಸ್.ಐ.ಆರ್ ದುರುಪಯೋಗ ಪ್ರಶ್ನಿಸಿ ಭಾರತದ ಧ್ವಜ ಹಿಡಿದು ಯುವಕರು ಪ್ರತಿಭಟಿಸಿದ್ದು, ಇದು ಅಪರಾಧ ಎಂಬAತೆ ಅವರನ್ನು ಬಂಧಿಸಿರುವ ಕೇಂದ್ರದ ನಡೆ ಖಂಡನೀಯ ಎಂದರು.
ಕೇಂದ್ರ ಸರಕಾರವು ಎಸ್.ಐ.ಆರ್ ದುರುಪಯೋಗಿಸಿ ೧೩ ಕೋಟಿ ಬಡವರ, ರೈತರ ಮತವನ್ನು ಕೀಳುವ ಪ್ರಯತ್ನ ನಡೆಸಿದೆ. ಇದರ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟದಿಂದ ಸರಕಾರ ನಡುಗಿದೆ. ಕೊಡಗಿನಲ್ಲಿಯೂ ಮತಗಳ್ಳತನ ಯತ್ನ ನಡೆದಿದ್ದು ೧,೭೧೦ ಜನರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಬೇಕೆಂಬ ಹುನ್ನಾರ ನಡೆದಿದೆ. ಈ ಪೈಕಿ ಒಟ್ಟು ೬೩ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಈ ಸಂಬAಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಸಮಗ್ರವಾಗಿ ಎಲ್ಲ ಪ್ರಕರಣಗಳ ಸಂಬAಧ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದರು.
ಪ್ರಮುಖರಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ೨೭ಲಕ್ಷ ಜನರನ್ನು ಮತದಾರರ ಪಟ್ಟಿಯ ಅಂತಿಮ ಪಟ್ಟಿಯಿಂದ ಬಿಡಲಾಗಿದೆ. ಈ ಪೈಕಿ ೨೩ ಲಕ್ಷ ಮಂದಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋದರು. ಆದರೆ ಚುನಾವಣೆ ಕಳೆದು ಬಿ.ಜೆ.ಪಿ ಅಲ್ಲಿ ಜಯಭೇರಿ ಸಾಧಿಸಿದ ಬಳಿಕ ಇದೀಗ ೬ ತಿಂಗಳುಗಳಾದ ನಂತರವಷ್ಟೆ ೨೩ ಲಕ್ಷ ಮಂದಿಯ ಪೈಕಿ ೧ ಲಕ್ಷ ಅರ್ಜಿದಾರರ ವಿಚಾರಣೆ ಮಾತ್ರ ಆಗಿದೆ. ಇದರಲ್ಲಿ ೯೩ ಸಾವಿರ ಅರ್ಹ ಮತದಾರರು ಎಂದು ತೀರ್ಪು ಹೊರಬಿದ್ದಿದೆ ಎಂದು ಅವರು ಹೇಳಿದರು. ಇನ್ನೂ ೨೨ ಲಕ್ಷ ಮಂದಿಯ ವಿಚಾರಣೆ ಬಾಕಿ ಇರುವುದು ವಿಪರ್ಯಾಸ ಹಾಗೂ ಖಂಡನೀಯ ಎಂದರು.
ವೇದಿಕೆಯ ಸಂಯೋಜಕ ನಿರ್ವಾಣಪ್ಪ ಮಾತನಾಡಿ, ಕೇಂದ್ರದಲ್ಲಿ ಬಿ.ಜೆ.ಪಿ ಕೋಮುವಾದಿ ನೀತಿ ಅನುಸರಿಸುತ್ತಿದೆ. ಬಿ.ಜೆ.ಪಿ ಅವರಿಗೆ ಮತ ಹಾಕದವರನ್ನು ಗುರಿಯಾಗಿಸಿ ಎಸ್.ಐ.ಆರ್ ದುರುಪಯೋಗಿಸಿ ಡಿಲೀಟ್ ಮಾಡಲಾಗಿದೆ. ಎಸ್.ಐ.ಆರ್ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಆದ ಮೇಲೆ ವಿವಿಧೆಡೆ ಚುನಾವಣೆಯಲ್ಲಿ ಬಿ.ಜೆ.ಪಿ ಗೆದ್ದಿದೆ. ಸಂವಿಧಾನಕ್ಕೆ ಅಪಚಾರ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಅವರು ಆರೋಪಿಸಿದರು. ಜ್ಞಾನೇಶ್ ಕುಮಾರ್ ರಾಜಿನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಪ್ರಗತಿಪರ ಚಿಂತಕ ಹಮೀದ್ ಮೌಲವಿ ಅವರು ಮಾತನಾಡಿ, ಕಾನೂನು ಬಾಹಿರ ಎಸ್.ಐ.ಆರ್ ರದ್ದು ಮಾಡಬೇಕು. ದೇಶದಾದ್ಯಂತ ಆದಿವಾಸಿಗಳ ಹಕ್ಕು, ಅಲ್ಪಸಂಖ್ಯಾತರ ಹಕ್ಕು ಧಮನವಾಗುತ್ತಿದೆ. ಎಸ್.ಐ.ಆರ್ ಪ್ರಕ್ರಿಯೆ ಸಂಪೂರ್ಣವಾಗಿ ರದ್ದು ಪಡಿಸಿ ಜ್ನಾನೇಶ್ ಕುಮಾರ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಯಾಕುಬ್ ಮಾಸ್ಟರ್ ಮಾತನಾಡಿ, ಕೇಂದ್ರ ಸರಕಾರ ಬಂದು ೧೫ ವರ್ಷಗಳಾದರೂ ದೇಶದ ಯುವಕರಿಗೆ ನೆಮ್ಮದಿ ಇಲ್ಲ. ಎಸ್.ಐ.ಆರ್ ಮೂಲಕ ಗೆಲ್ಲಲು ಕುತಂತ್ರ ನಡೆಸಿರುವ ಬಿ.ಜೆ.ಪಿ ನಡೆ ಖಂಡನೀಯ ಎಂದರು.
ಸAವಿಧಾನ ಪೂರ್ವ ಪೀಠಿಕೆ ಓದಿದ ವಕೀಲ ಜುನೈದ್, ಪ್ರತಿಭಟನಾಕಾರರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವೇದಿಕೆಯ ಸದಸ್ಯರಾದ ಪ್ರೇಮ್ ಕುಮಾರ್, ಗೌರವಾಧ್ಯಕ್ಷ ಹನೀಫ್, ಪ್ರಮುಖರಾದ ಮನ್ಸೂರ್, ಜಾನ್ಸನ್ ಪಿಂಟೋ ಹಾಗೂ ಇತರರು ಇದ್ದರು.