ಸೋಮವಾರಪೇಟೆ, ಅ. ೧೪: ಕನ್ನಡ ರಾಜ್ಯೋತ್ಸವ ಅಂಗವಾಗಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕೀಡಾಕೂಟದಲ್ಲಿ ಚಾಣಕ್ಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಟೆನ್ನಸ್ ಬಾಲ್ ಕ್ರಿಕೆಟ್, ಕಬ್ಬಡಿ, ಹಗ್ಗಜಗ್ಗಾಟ ಪಂದ್ಯಾಟಗಳ ಮೊದಲ ಬಹುಮಾನವನ್ನು ಚಾಣುಕ್ಯ ತಂಡ ಮುಡಿಗೇರಿಸಿಕೊಂಡಿತು.

ಕ್ರಿಕೆಟ್ ದ್ವಿತೀಯ ಸ್ಥಾನವನ್ನು ಟೀಮ್ ೧೮ ಬಜೆಗುಂಡಿ, ಕಬಡ್ಡಿ ಎರಡನೇ ಸ್ಥಾನವನ್ನು ಕರುನಾಡ ಕಿಂಗ್ಸ್ ತಂಡ, ಹಗ್ಗಜಗ್ಗಾಟದ ದ್ವಿತೀಯ ಸ್ಥಾನವನ್ನು ಜೇಸಿ ವೇದಿಕೆ ತಂಡ ಪಡೆಯಿತು. ಬಾಂಬ್ ಇನ್ ದ ಸಿಟಿ ಆಟದಲ್ಲಿ ದಿನೇಶ್ ಬಜೆಗುಂಡಿ ಹಾಗೂ ಸಿ.ಸಿ.ಪ್ರದೀಪ್ ಬಹುಮಾನ ಪಡೆದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರವೇ(ಪ್ರವೀಣ್‌ಶೆಟ್ಟಿ ಬಣ) ನಗರಾಧ್ಯಕ್ಷ ಬಿ.ಎಸ್.ಮಂಜುನಾಥ್ ಮಾತನಾಡಿ, ಕನ್ನಡಪರ ಹೋರಾಟದಲ್ಲಿ ಅಟೋ ಚಾಲಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯವಾಗಿದೆ. ಗರ್ಭಿಣಿಯರಿಗೆ, ಅಂಗವಿಕಲರಿಗೆ ಉಚಿತ ಸೇವೆ ಒದಗಿಸುವ ಆಟೋ ಚಾಲಕರು ಇದ್ದಾರೆ. ಚಾಲನ ವೃತ್ತಿಯಲ್ಲೇ ಸಮಾಜಸೇವೆಯನ್ನು ಮಾಡುವ ಬಹಳಷ್ಟು ಚಾಲಕರು ನಮ್ಮೆಲ್ಲರ ಮಧ್ಯೆ ಇದ್ದಾರೆ ಎಂದು ಪ್ರಶಂಸೆಯ ಮಾತನಾಡಿದರು. ವೇದಿಕೆಯಲ್ಲಿ ಆಟೋ ಯೂನಿಯನ್ ಅಧ್ಯಕ್ಷ ಸಂಪತ್, ಮಾಜಿ ಅಧ್ಯಕ್ಷ ಆರ್.ಮೋಹನ್, ಕಾರ್ಯದರ್ಶಿ ಕವನ್, ಪದಾಧಿಕಾರಿಗಳಾದ ಯಡೂರು ಪ್ರಸನ್ನ, ಐಗೂರು ವಿಜಯ್, ಜಗದೀಶ್, ರವೀಶ್ ಕಲ್ಕಂದೂರು ಇದ್ದರು. ನಿಶಾನಿ ಮಂಜುನಾಥ್ ಪ್ರಾರ್ಥಿಸಿದರು.