ಸುಂಟಿಕೊಪ್ಪ, ಅ. ೧೪: ಕಂಬಿಬಾಣೆಯಲ್ಲಿ ೭೧ನೇ ವರ್ಷದ ನವರಾತ್ರಿ ಉತ್ಸವದ ಯಕ್ಷಗಾನ ಕಾರ್ಯಕ್ರಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ೭೧ ನೇ ದಸಾರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಕಳೆದ ೭೧ ವರ್ಷಗಳಿಂದ ನಿರಂತರವಾಗಿ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಗ್ರಾಮಸ್ಥರು ತಮ್ಮ ಪ್ರಯತ್ನದಲ್ಲಿ ವರ್ಷದಿಂದ ವರ್ಷಕ್ಕೆ ಯಶಸ್ಸು ಕಾಣುತ್ತಿದ್ದು ಮುಂಬರುವ ವರ್ಷಗಳಲ್ಲಿಯೂ ಕೂಡ ಯಶಸ್ಸು ಕಾಣಲಿ ಎಂದು ಹಾರೈಸಿದರು. ದೇವಿಯ ಆರಾಧನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಈ ಬಾರಿ ವಿಶೇಷವಾಗಿ ಮಂಜನಾಡಿ ಮಂಗಳೂರಿನ ಸುಘೋಷ ಪಾಂಚಜನ್ಯ ಯಕ್ಷ ನಾಟ್ಯಾಲಯ ವತಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ ವನ್ನು ಹಮ್ಮಿಕೊಂಡಿರುವುದು ವಿಶೇಷ ಆಕರ್ಷಣೆಯಾಗಿದೆ ಎಂದು ಅವರು ಹೇಳಿದರು. ಜಾಗದ ದಾಖಲಾತಿ ಪತ್ರಗಳನ್ನು ಸಮಿತಿಯ ಹೆಸರಿಗೆ ಬದಲಾವಣೆಗೊಳಿಸಿ ಕೊಂಡಲ್ಲಿ ಸರಕಾರದ ಅನುದಾನ ಮತ್ತು ಸವಲತ್ತು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರನ್ನು ತನ್ನತ ಸೆಳೆಯುತ್ತವೆ. ಕಂಬಿಬಾಣೆಯ ರಾಮ ಮಂದಿರ ಪ್ರತಿ ವರ್ಷ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಇತರರಿಗೆ ಮಾದರಿ ಎಂದು ಅವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಆಡಳಿತ ಸಮಿತಿಯ ಅಧ್ಯಕ್ಷ ಡಾ.ಶಶಿಕಾಂತ ರೈ ವಹಿಸಿ ಮಾತನಾಡಿ, ದೇವಾಲಯವು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಊರಿನವರ ಮತ್ತು ದಾನಿಗಳ ನೆರವಿನಿಂದ ಅಭಿವೃದ್ಧಿ ಹೊಂದುತ್ತಿದೆ ಎಂದರು.