ಗೋಣಿಕೊಪ್ಪಲು, ಅ. ೧೪: ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ದಸರಾ ಜನೋತ್ಸವದ ಅಂಗವಾಗಿ ೧೧ನೇ ವರ್ಷದ ಮಹಿಳಾ ದಸರಾವನ್ನು ವಿಶೇಷವಾಗಿ ಆಚರಿಸಲಾಯಿತು. ಬಣ್ಣಬಣ್ಣದ ಉಡುಗೆ ತೊಟ್ಟ ಮಹಿಳೆಯರು ದೈನಂದಿನ ಕೆಲಸಗಳ ಜಂಜಾಟವನ್ನು ಬದಿಗೊತ್ತಿ, ಮುಂಜಾನೆಯಿAದ ಸಂಜೆಯವರೆಗೆ ನಡೆದ ವಿವಿಧ ಆಟೋಟ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಬೆಳಿಗ್ಗೆ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡ ಮಹಿಳೆಯರು, ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದರು. ನಾಣಚ್ಚಿಯ ಗಿರಿಜನರ ಕಲಾತಂಡದ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಕಳಸ ಹೊತ್ತ ಮಹಿಳೆಯರು ಹಾಗೂ ಯುವತಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಮೆರವಣಿಗೆಯು ಕಾವೇರಿ ಕಲಾ ವೇದಿಕೆಯ ಆವರಣಕ್ಕೆ ತಲುಪಿದ ಬಳಿಕ ವಿವಿಧ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಮಹಿಳೆಯರು ತಯಾರಿಸಿದ ಉತ್ಪನ್ನಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳನ್ನೂ ತೆರೆಯಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಮಹಿಳೆಯರು ಸೈ ಎನಿಸಿಕೊಂಡರು.
ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ಹಾಗೂ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ಎಂ. ಮಂಜುಳ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಕಲಾ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹಾಗೂ ಗುತ್ತಿಗೆದಾರ ದೇವರಾಜ್ ಉದ್ಘಾಟಿಸಿದರು. ಇದೇ ಸಂದರ್ಭ ಮಹಿಳೆಯರ ಕ್ರೀಡಾಕೂಟಕ್ಕೂ ಚಾಲನೆ ನೀಡಲಾಯಿತು.
೧೧ನೇ ವರ್ಷದ ಮಹಿಳಾ ದಸರಾವನ್ನು ಉದ್ಘಾಟಿಸಿದ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಲ್ಲೆಟಿರ ಪ್ರವಿ ಮೊಣ್ಣಪ್ಪ ಅವರ ವಿಶೇಷ ಪ್ರಯತ್ನದಿಂದ ಕಳೆದ ೧೦ ವರ್ಷಗಳ ಹಿಂದೆ ಮಹಿಳಾ ದಸರಾವು ಆರಂಭವಾಯಿತು. ವರ್ಷದಿಂದ ವರ್ಷಕ್ಕೆ ಮಹಿಳಾ ದಸರಾವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಹಿಳೆಯರೆಲ್ಲರೂ ವಾರ್ಷಿಕವಾಗಿ ಮಹಿಳಾ ದಸರಾ ದಿನದಂದು ಒಟ್ಟಾಗಿ ಬೆರೆಯುವ ಅವಕಾಶಗಳು ಒದಗಿ ಬರುತ್ತಿರುವುದು ಶ್ಲಾಘನೀಯ ಎಂದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಯೋಜನಾ ಸಮನ್ವಯ ಅಧಿಕಾರಿ ಹೆಚ್.ಸಿ. ಭಾಗೀರಥಿ, ಪೊನ್ನಂಪೇಟೆ ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್. ರೀತಾ, ಬಿಟ್ಟಂಗಾಲದ ಖ್ಯಾತ ವೈದ್ಯೆ ಡಾ. ಅಪೂರ್ವ, ತಿತಿಮತಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಂ. ಪಾರ್ವತಿ, ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಸಿ.ಎನ್. ಶಾಂತಿ, ಸಂತ ಥೋಮಸ್ ಶಾಲೆಯ ಹಿರಿಯ ಶಿಕ್ಷಕಿ ನಿರ್ಮಲ ಮೈಕಲ್, ಪೊನ್ನಂಪೇಟೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೂಕಳೆರ ಆಶಾ ಪೂಣಚ್ಚ, ವೀರಾಜಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೈನಾ ಜಗತ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಎಂ. ಲಕ್ಷ್ಮಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಮಾವತಿ, ಸಾಹಿತಿ ಪ್ರತಿಮಾ ಹರೀಶ್ ರೈ, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಮಹಿಳಾ ದಸರಾ ಮಹಿಳೆಯರ ಪ್ರತಿಭೆ, ಸೃಜನಶೀಲತೆ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಸೆಯುವ ವೇದಿಕೆಯಾಗಿ ಗಮನ ಸೆಳೆಯಿತು.