ಮಡಿಕೇರಿ, ಅ. ೧೪: ಹಿಂದೂ ಜಾಗರಣ ವೇದಿಕೆ ಸದಸ್ಯರು ಮತ್ತು ಸ್ಥಳೀಯ ಆಟೋ ಚಾಲಕರು ನೀಡಿದ ಮಾಹಿತಿಯ ಮೇರೆಗೆ, ಕೊಡಗು ಪೊಲೀಸರು ಕಾರ್ಯಾಚರಣೆ ನಡೆಸಿ ಬಾಳೆಲೆಯ ಕೊಟ್ಟಗೇರಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಈ ಕುಟುಂಬವು ಅಸ್ಸಾಂನ ಕಾರ್ಮಿಕರೆಂದು ಹೇಳಿಕೊಂಡು ವಾಸಿಸುತ್ತಿದ್ದುದಾಗಿ ಆರೋಪಿಸಲಾಗಿದೆ.

ಸುಜಾನ್ (೩೨), ಸೋನಿಯಾ (೨೮), ಸಂಜಿಧಾ (೧೦) ಮತ್ತು ಶಿಯಾಮ (೫) ಎಂದು ಗುರುತಿಸಲಾದ ಈ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಆರ್.ಎನ್. ದೃಢಪಡಿಸಿದ್ದಾರೆ. ಬಂಧಿಸಲಾದ ನಾಲ್ವರನ್ನು ಬಾಂಗ್ಲಾದೇಶಕ್ಕೆ ಕಳಿಸುವ ಮುನ್ನ ಬೆಂಗಳೂರಿನಲ್ಲಿರುವ ಡಿಟೆನ್ಷನ್ ಸೆಂಟರ್‌ಗೆ ಸ್ಥಳಾಂತರಿಸಲಾಗುವುದು ಎಂದು ಎಸ್.ಪಿ ಮಾಹಿತಿ ನೀಡಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿಯಲ್ಲಿರುವ ತೋಟವೊಂದರಲ್ಲಿ ಈ ಕುಟುಂಬ ಕೆಲಸ ಮಾಡುತ್ತಿದ್ದು, ಸ್ಥಳೀಯ ಹಿಂದೂ ಪರ ಕಾರ್ಯಕರ್ತರು, ಹಿಂದೂ ಜಾಗರಣಾ ವೇದಿಕೆ ಸದಸ್ಯರು ಮತ್ತು ಪೊನ್ನಂಪೇಟೆ ಆಟೋ ಚಾಲಕರ ಸಂಘದವರು ಈ ಗುಂಪನ್ನು ತಡೆದು ಗುರುತಿನ ದಾಖಲೆಗಳನ್ನು ಕೇಳಿದಾಗ ಅವರು ದಾಖಲೆಗಳನ್ನು ಒದಗಿಸಲು ವಿಫಲರಾದಾಗ, ಕಾರ್ಯಕರ್ತರು ಅವರನ್ನು ವಿಚಾರಣೆ ನಡೆಸಿ ನಂತರ ಪೊನ್ನಂಪೇಟೆ ಪೊಲೀಸರಿಗೆ ಒಪ್ಪಿಸಿದರು. ಪಶ್ಚಿಮ ಬಂಗಾಳದ ಮಧ್ಯವರ್ತಿಯೊಬ್ಬರಿಗೆ ಹಣ ನೀಡಿ ಅಕ್ರಮವಾಗಿ ಭಾರತದ ಅಂತರರಾಷ್ಟಿçÃಯ ಗಡಿಯನ್ನು ದಾಟಿರುವುದಾಗಿ ಕುಟುಂಬವು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಅಕ್ರಮ ಗಡಿ ನುಸುಳುವಿಕೆ ಪ್ರಕರಣಗಳಲ್ಲಿ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲವಾದರೂ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೊದಲು ಮಾಲೀಕರು ಅವರ ದಾಖಲಾತಿಗಳನ್ನು ಪರಿಶೀಲನೆ ನಡೆಸುವಂತೆ ತೋಟದ ಮಾಲೀಕರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಎಸ್.ಪಿ ತಿಳಿಸಿದ್ದಾರೆ.