ಕುಶಾಲನಗರ, ಅ. ೧೪: ದಕ್ಷಿಣ ಕನ್ನಡ ಜಿಲ್ಲೆಯಿಂದ ಮಡಿಕೇರಿ ಮೂಲಕ ಮೈಸೂರು ಕಂಬಳ ದಸರಾಗೆ ತೆರಳುವ ಕಂಬಳದ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆAದು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪುರಸಭೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪುರಸಭೆ ಅಧಿಕಾರಿಗಳು ಕಂಬಳ ಆಚರಣಾ ಸಮಿತಿ, ವಿವಿಧ ಸಂಘ-ಸAಸ್ಥೆಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್, ಸಿದ್ಧತೆಗಳ ಬಗ್ಗೆ ಮಾಹಿತಿ ಒದಗಿಸಿದರು. ತಾ. ೧೭ ರಂದು ಮಧ್ಯಾಹ್ನ ಅಂದಾಜು ೧೫೦ಕ್ಕೂ ಅಧಿಕ ಜೋಡಿ ಕಂಬಳದ ಕೋಣಗಳು ಕುಶಾಲನಗರಕ್ಕೆ ಆಗಮಿಸಲಿದೆ.

ಅವುಗಳಿಗೆ ಗುಂಡೂರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ವಿಶ್ರಾಂತಿ ಮತ್ತು ಮೇವಿಗೆ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಬರುವ ೨೦೦೦ ಮಂದಿ ಸೇರಿದಂತೆ ಕೋಣಗಳನ್ನು ವೀಕ್ಷಿಸಲು ಆಗಮಿಸುವ ಕುಶಾಲನಗರ ಸುತ್ತಮುತ್ತಲಿನ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕೋಣಗಳನ್ನು ಸ್ವಾಗತಿಸಿ ಬೀಳ್ಕೊಡುವ ನಡುವೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನ ಶಾಸಕದ್ವಯರು ಸೇರಿದಂತೆ ಪುತ್ತೂರು ಕ್ಷೇತ್ರ ಶಾಸಕರು ಈ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಕರಾವಳಿ ವಾದ್ಯಗೋಷ್ಠಿ, ಹುಲಿವೇಷ ಕುಣಿತ ಪ್ರದರ್ಶನ ಕೂಡ ಇರುತ್ತದೆ ಎಂದು ಮಾಹಿತಿ ನೀಡಿದರು.

ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಮಾತನಾಡಿ, ಕುಶಾಲನಗರ ಭಾಗದ ಜನತೆ ಪ್ರಸಿದ್ಧ ಕಂಬಳ ಕೋಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಶಾಸಕ ಮಂತರ್ ಗೌಡ ಕಲ್ಪಿಸಿದ್ದಾರೆ. ನಾವೂ ಕೂಡ ಕಂಬಳದ ಕೋಣಗಳನ್ನು ಸ್ವಾಗತಿಸಿ ಅಲ್ಲಿನ ಕಲೆಯನ್ನು ಪ್ರೋತ್ಸಾಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಮಂದಿ ಅಂದು ಭಾಗಿಯಾಗಬೇಕಿದೆ. ಕುಶಾಲನಗರದ ಪ್ರಸಿದ್ಧ ಗೋಜಾತ್ರೆ ಸಂದರ್ಭ ಕಂಬಳ ಏರ್ಪಡಿಸಿದಲ್ಲಿ ಮತ್ತಷ್ಟು ಮೆರಗು ದೊರೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಪುತ್ತೂರು ಶಾಸಕರ ಗಮನ ಸೆಳೆಯಬೇಕಿದೆ ಎಂದು ಆಗ್ರಹಿಸಿದರು.

ವಿಶ್ವ ತುಳುವೆರ ಕೂಟದ ಅಧ್ಯಕ್ಷ ಐತಪ್ಪ ರೈ, ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಮಾತನಾಡಿ, ಕುಶಾಲನಗರದಲ್ಲಿ ಕಂಬಳದ ಕೋಣಗಳಿಗೆ ವಿಶ್ರಾಂತಿ ವ್ಯವಸ್ಥೆ, ಊಟೋಪಚಾರಕ್ಕೆ ಅಗತ್ಯ ವ್ಯವಸ್ಥೆಯನ್ನು ಶಾಸಕ ಡಾ. ಮಂತರ್ ಗೌಡ ಮತ್ತು ಸ್ಥಳೀಯ ಮುಖಂಡರು ಕಲ್ಪಿಸಿದ್ದಾರೆ ಎಂದರು.

ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮಾಜಿ ಸದಸ್ಯರುಗಳಾದ ಡಿ.ಕೆ. ತಿಮ್ಮಪ್ಪ, ಜಗದೀಶ್, ಸುರಯ್ಯಭಾನು, ತುಳುವರೆ ಕೂಟದ ಪ್ರಕಾಶ್ ಆಚಾರ್ಯ, ಅಪ್ರು ರವೀಂದ್ರ, ಮೊಗೇರ ಸಂಘದ ದಾಮೋದರ್, ಸ್ಥಳೀಯ ಸಂಘ-ಸAಸ್ಥೆಗಳ ಪ್ರಮುಖರು, ಆರೋಗ್ಯ ನಿರೀಕ್ಷಕ ಉದಯ ಕುಮಾರ್ ಮತ್ತಿತರರು ಇದ್ದರು.