ಮಡಿಕೇರಿ, ಅ.೧೪: ಪಡಿತರ ಚೀಟಿದಾರರ ಇ-ಕೆವೈಸಿ ಸಮಸ್ಯೆಗೆ ಇದೀಗ ಪರಿಹಾರ ದೊರೆತಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.
ಅನ್ನಭಾಗ್ಯ ಸೇರಿದಂತೆ ವಿವಿಧ ಪಡಿತರ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಆಹಾರ ಇಲಾಖೆ ಅಭಿವೃದ್ಧಿಪಡಿಸಿರುವ ‘ಅನ್ನ ಸೇವೆ’ ಮೊಬೈಲ್ ಆ್ಯಪ್ ತಾ.೧೪ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್, ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆ್ಯಪ್ ಜಾರಿಗೊಳಿಸಲಾಗಿತ್ತು. ಅ.೧ರಿಂದ ೧೨ರವರೆಗೆ ಈ ಎಂಟು ಜಿಲ್ಲೆಗಳಲ್ಲಿ ೧,೬೦,೨೬೭ ಮಂದಿ ಆ್ಯಪ್ ಮೂಲಕ ಯಶಸ್ವಿಯಾಗಿ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ.
ಬಹುತೇಕ ಪಡಿತರ ಫಲಾನುಭವಿಗಳು ಕಾರ್ಮಿಕ ವರ್ಗದವರಾಗಿದ್ದು, ಉದ್ಯೋಗಕ್ಕಾಗಿ ಊರು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿರುತ್ತಾರೆ. ಇ-ಕೆವೈಸಿ ಪೂರ್ಣಗೊಳಿಸಲು ಮತ್ತೆ ಊರಿಗೆ ಆಗಮಿಸಿ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಇದೀಗ ‘ಅನ್ನ ಸೇವೆ’ ಆ್ಯಪ್ ಮೂಲಕ ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡು ಎಲ್ಲಿಂದ ಬೇಕಾದರೂ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ತಾ. ೨೦ ಕೊನೆಯ ದಿನವಾಗಿದೆ.
ಕೊಡಗಿನಲ್ಲಿ ಶೇ.೭೨ರಷ್ಟು ಪೂರ್ಣ
ಕೊಡಗು ಜಿಲ್ಲೆಯಲ್ಲಿ ಅ.೧೨ರ ವೇಳೆಗೆ ಪಡಿತರ ಚೀಟಿದಾರರ ಇ-ಕೆವೈಸಿ ಶೇ.೭೨ರಷ್ಟು ಪೂರ್ಣಗೊಂಡಿದೆ. ಜಿಲ್ಲೆಯ ಒಟ್ಟು ೧,೯೯,೮೦೧ ಸದಸ್ಯರ ಪೈಕಿ ೧,೪೩,೮೪೫ ಮಂದಿಯ ಇ-ಕೆವೈಸಿ ಪೂರ್ಣಗೊಂಡಿದ್ದು, ೫೫,೯೫೬ ಮಂದಿ ಬಾಕಿ ಉಳಿದಿದ್ದಾರೆ.
ಸೋಮವಾರಪೇಟೆ ತಾಲೂಕಿನ ೪೪,೪೦೮ ಸದಸ್ಯರ ಪೈಕಿ ೩೪,೨೦೮ ಪೂರ್ಣವಾಗಿದ್ದು, ೧೦,೨೦೦ ಬಾಕಿ ಇದೆ. ಕುಶಾಲನಗರ ತಾಲೂಕಿನಲ್ಲಿ ೪೧,೯೯೮ ಪೈಕಿ ೩೧,೬೪೪ ಪೂರ್ಣಗೊಂಡಿದ್ದು, ೧೦,೩೫೪ ಬಾಕಿ. ಮಡಿಕೇರಿ ತಾಲೂಕಿನಲ್ಲಿ ೪೬,೪೦೫ ಪೈಕಿ ೩೩,೬೫೦ ಪೂರ್ಣ, ೧೨,೭೫೫ ಬಾಕಿ, ವೀರಾಜಪೇಟೆ ತಾಲೂಕಿನಲ್ಲಿ ೩೭,೯೩೦ ಪೈಕಿ ೨೫,೨೭೫ ಪೂರ್ಣ, ೧೨,೬೫೫ ಬಾಕಿ. ಪೊನ್ನಂಪೇಟೆ ತಾಲೂಕಿನಲ್ಲಿ ೨೯,೦೬೦ ಪೈಕಿ ೧೯,೦೬೮ ಪೂರ್ಣ, ೯,೯೯೨ ಬಾಕಿ ಇದೆ.
ಜಿಲ್ಲೆಯ ೧೭೬ ನ್ಯಾಯಬೆಲೆ ಅಂಗಡಿಗಳ ಪೈಕಿ ಶೇ.೭೦ಕ್ಕಿಂತ ಹೆಚ್ಚು ಇ-ಕೆವೈಸಿ ಪೂರ್ಣಗೊಂಡಿರುವ ಅಂಗಡಿಗಳ ಸಂಖ್ಯೆ ಗಣನೀಯವಾಗಿದೆ. ಶೇ.೫೧ರಿಂದ ೭೦ರಷ್ಟು ಇ-ಕೆವೈಸಿ ಪೂರ್ಣಗೊಂಡಿರುವ ೮೪ ನ್ಯಾಯಬೆಲೆ ಅಂಗಡಿಗಳಿದ್ದು, ಶೇ.೨೧ರಿಂದ ೫೦ರಷ್ಟು ಇ-ಕೆವೈಸಿ ಪೂರ್ಣಗೊಂಡಿರುವ ೧೪ ಅಂಗಡಿಗಳಿವೆ. - ಇಸ್ಮಾಯಿಲ್ ಕಂಡಕರೆ