ಸಿದ್ದಾಪುರ, ಅ. ೧೪: ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯಿತು.
ಮೈಸೂರಿನ ಜಿ.ಸಿ.ಎಸ್. ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜನಪರ ಸಂಘಟನೆ, ಒಡಿಪಿ ಮಹಿಳಾ ಒಕ್ಕೂಟ ಹಾಗೂ ಮುತ್ತಪ್ಪ ದೇವಸ್ಥಾನ ಸಮಿತಿಯ ಸಹಯೋಗದಲ್ಲಿ ಮಾಲ್ದಾರೆ ಮುತ್ತಪ್ಪ ದೇವಸ್ಥಾನದ ಸಮುದಾಯ ಭವನದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭ ಜನಪರ ಸಂಘಟನೆಯ ಅಧ್ಯಕ್ಷ ಭಾವ ಮಾಲ್ದಾರೆ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಂಡು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ಮಧುಮೇಹ, ಮೂಳೆ ಮತ್ತು ಕೀಲು ಚಿಕಿತ್ಸೆ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗಗಳ ನುರಿತ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. ಅಗತ್ಯ ಔಷಧಿಗಳನ್ನು ವಿತರಿಸಿ, ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಸಲಹೆ ನೀಡಿದರು
ಗ್ರಾಮದ ನೂರಾರು ಮಂದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮುತ್ತಪ್ಪ ದೇವಸ್ಥಾನ ಸಮಿತಿಯ ಅಜೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಂಞಣ್ಣ, ಒಡಿಪಿ ಸಂಸ್ಥೆಯ ಸಂಯೋಜಕಿ ಜಾಯ್ಸ್ ಮೆನೇಜಸ್, ಧನು ಕುಮಾರ್, ಜಿ.ಸಿ.ಎಸ್. ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಪಾರ್ಥಸಾರಥಿ, ಡಾ. ಜಗದೀಶ್, ಡಾ. ಅರ್ಪಿತಾ, ಡಾ. ಧನ್ಯ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.