ಮಡಿಕೇರಿ, ಅ. ೧೪; ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ಗಡೀಪಾರು ಮಾಡುವಂತೆ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಸಂಯೋಜಕ ಬೋಜೇಗೌಡ; ಕೊಡಗು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ದೇಶದಿಂದ ಹೊರಗಟ್ಟುವಂತೆ ಆಗ್ರಹಿಸಿ ಇತ್ತೀಚೆಗಷ್ಟೆ ಜಿಲ್ಲೆಯಾದ್ಯಂತ ೧೨ ದಿನಗಳ ಕಾಲ ವಾಹನ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಲಾಗಿತ್ತು. ಆದರೆ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವದೇ ಕ್ರಮ ಕೈಗೊಂಡಿಲ್ಲ. ನಿನ್ನೆ ಪೊನ್ನಂಪೇಟೆ ತಾಲೂಕಿನ ಬಾಳೆಲೆಯ ತೋಟವೊಂದರಲ್ಲಿ ಕಾರ್ಮಿಕರಾಗಿ ನೆಲೆಸಿದ್ದ ಬಾಂಗ್ಲಾದೇಶಿ ವಲಸಿಗರನ್ನು ಹಿಂದೂ ಜಾಗರಣಾ ವೇದಿಕೆ ಹಾಗೂ ಸಂಘಟನೆಗಳು, ಸಾರ್ವಜನಿಕರ ಸಹಕಾರದೊಂದಿಗೆ ಪತ್ತೆಹಚ್ಚಲಾಗಿದೆ. ಸಂಘಟನೆಯವರಿಗೆ ಸಿಕ್ಕುವ ವಲಸಿಗರು ಪೊಲೀಸರಿಗೇಕೆ ಸಿಗುತ್ತಿಲ್ಲವೆಂದು ಪ್ರಶ್ನಿಸಿದರು. ಪೊಲೀಸ್ ಇಲಾಖೆ ಹೋರಾಟಗಾರರಿಗೆ ಕಿರುಕುಳ ನೀಡುವದಲ್ಲದೆ ದೇಶದ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತಿಲ್ಲ, ಜಿಲ್ಲೆಯಲ್ಲಿರುವ ವಲಸಿಗರ ಬಗ್ಗೆ ಇಲಾಖೆಯಲ್ಲಿ ಯಾವದೇ ಮಾಹಿತಿ ಇಲ್ಲ, ಆದರೆ ಜಿಲ್ಲೆಯಲ್ಲಿ ೫೦ಸಾವಿರಕ್ಕೂ ಅಧಿಕ ಮಂದಿ ವಲಸಿಗರಿದ್ದಾರೆ ಎಂಬ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.೧೦ರಷ್ಟು ಭಾಗ ವಲಸಿಗರೇ ನೆಲೆಸಿದ್ದಾರೆ. ವಲಸಿಗರ ಮಕ್ಕಳು ಶಾಲೆಗೂ ಹೋಗುವದಿಲ್ಲ, ಶಿಕ್ಷಣ ಪಡೆಯದ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಂಭವವಿದೆ. ಈಗಾಗಲೇ ವಲಸಿಗರು ಕಳ್ಳತನ, ಹಲ್ಲೆ, ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಗೋಮಾಂಸ ಮಾರಾಟದಂತಹ ಕೃತ್ಯಗಳಲ್ಲಿ ಭಾಗಿಯಾಗಿರುವದನ್ನು ನೋಡಿದ್ದೇವೆ. ಕೊಡಗು ಸುರಕ್ಷಿತವಾಗಿರುವದು ಒಂದು ಸವಾಲಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ ಕೂಡಲೇ ಕಾರ್ಯಾಚರಣೆ ನಡೆಸಿ ಅಕ್ರಮ ಬಾಂಗ್ಲಾದೇಶಿಗರನ್ನು ಪತ್ತೆಹಚ್ಚಿ ದಾಖಲೆ ಸಂಗ್ರಹ ಮಾಡಿ ಬಹಿರಂಗಪಡಿಸಬೇಕು. ವಲಸಿಗರನ್ನು ಗಡೀಪಾರು ಮಾಡುವದರೊಂದಿಗೆ ಅವರುಗಳಿಗೆ ಆಶ್ರಯ ನೀಡುವ ಮಾಲೀಕರುಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು. ಇದು ತೋಟ, ಕಾರ್ಮಿಕರ ಸಮಸ್ಯೆ ಮಾತ್ರವಲ್ಲ; ದೇಶದ ಆಂತರಿಕ ಭದ್ರತೆಯ ಸಮಸ್ಯೆಯಾಗಿದೆ. ಹಾಗಾಗಿ ತಿಂಗಳ ಒಳಗಡೆ ಪೊಲೀಸ್ ಇಲಾಖೆ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆ ಮೂಲಕ ಹೋರಾಟ ಮಾಡಲಾಗುವದೆಂದು ಬೋಜೇಗೌಡ ಹೇಳಿದರು.

ಕಾರ್ಮಿಕ ಇಲಾಖೆ ಕೂಡ ತನ್ನ ಪಾತ್ರ ಮರೆತಂತಿದೆ, ಇಲಾಖೆಯಲ್ಲಿ ವಲಸೆ ಕಾರ್ಮಿಕರ ಬಗ್ಗೆ ಯಾವದೇ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಹಿಂಜಾವೇ ಸಹ ಸಂಯೋಜಕರಾದ ಅಲ್ಲುಮಾಡ ಶರತ್, ಸುನಿಲ್ ಮಾದಾಪುರ, ಯೋಗೇಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕುಮಾರ್, ತಾಲೂಕು ಕಾರ್ಯಕಾರಿಣಿ ಸದಸ್ಯ ವಿವೇಕ್ ಇದ್ದರು