*ಗೋಣಿಕೊಪ್ಪ, ಅ. ೧೩: ಗೋಣಿಕೊಪ್ಪ ೧ನೇ ವಿಭಾಗದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕೊಣಿಯಂಡ ಬೋಜಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ಗರ್ಭಿಣಿಯರು ಮನೆಯಲ್ಲಿಯೇ ತಯಾರಿಸಿದ ಪೌಷ್ಟಿಕ ಆಹಾರ ಸೇವಿಸಬೇಕು. ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಸೇವಿಸುವುದರ ಜೊತೆಗೆ ಕಾಲಕಾಲಕ್ಕೆ ಅಗತ್ಯ ಲಸಿಕೆಗಳನ್ನು ಪಡೆಯಬೇಕು ಎಂದು ಆರೋಗ್ಯ ಸಲಹೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಪ್ರಮೋದ್ ಕಾಮತ್ ಮಾತನಾಡಿ, ಸರಕಾರದ ಮಹತ್ವದ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಆಹ್ವಾನದ ಮೇರೆಗೆ ಭಾಗವಹಿಸಿರುವುದು ಸಂತಸ ತಂದಿದೆ. ರೋಟರಿ ಸಂಸ್ಥೆಯು ಹಲವು ಸರಕಾರಿ ಯೋಜನೆಗಳಿಗೆ ಕೈಜೋಡಿಸುತ್ತಿದ್ದು, ಪ್ರತಿವರ್ಷ ಅಂಗನವಾಡಿ ಹಾಗೂ ಶಾಲೆಗಳಿಗೆ ಮಕ್ಕಳಿಗೆ ಅಗತ್ಯವಿರುವ ಸಾಧನ-ಸಲಕರಣೆಗಳನ್ನು ಒದಗಿಸುತ್ತಿದೆ. ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆಯೂ ಸಂಸ್ಥೆ ಕಾಳಜಿ ವಹಿಸುತ್ತಿದೆ ಎಂದರು.

ಅAಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ಮಾತನಾಡಿ, ಪೋಷಣ್ ಮಾಸಾಚರಣೆಯ ಅಂಗವಾಗಿ ಫಲಾನುಭವಿಗಳಿಗೆ ಪೂರಕ ಆಹಾರ ವಿತರಣೆ, ಲಸಿಕೆ, ಆರೋಗ್ಯ ತಪಾಸಣೆ, ಮಕ್ಕಳ ಎತ್ತರ ಮತ್ತು ತೂಕ ಪರಿಶೀಲನೆ, ಫಲಾನುಭವಿಗಳ ನೋಂದಣಿ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ನೋಂದಣಿ, ತಾಯಂದಿರ ಸಭೆ, ಕಿಶೋರಿ ಸಭೆ, ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ರೋಟರಿ ಸಂಸ್ಥೆ ಸದಸ್ಯರು, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಮಿತ್ರ ಗರ್ಭಿಣಿಯರಿಗೆ ಸೀಮಂತ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪೌಷ್ಟಿಕ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಲಾಗಿತ್ತು.

ಅಂಗನವಾಡಿ ಕಾರ್ಯಕರ್ತೆ ಪ್ರಮೀಶ, ದೇವಮ್ಮ, ದೀಪ್ತಿ, ಆಶಾ ಕಾರ್ಯಕರ್ತೆಯರು, ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಮಕ್ಕಳ ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.