ಮಡಿಕೇರಿ, ಅ. ೧೩: ಮಡಿಕೇರಿ ದಸರಾ ಪ್ರಯುಕ್ತ ಆಯೋಜಿಸಿರುವ ಕಾಫಿ ದಸರಾದ ಮಳಿಗೆಗಳ ಉದ್ಘಾಟನೆ ಸಂದರ್ಭ ಮಡಿಕೇರಿ ನಗರಸಭಾ ಪೌರಕಾರ್ಮಿಕರನ್ನು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು.

ಶಾಸಕ ಡಾ. ಮಂತರ್ ಗೌಡ ಅವರ ವೈಯಕ್ತಿಕ ಅನುದಾನದಲ್ಲಿ ೬೪ ಮಂದಿ ಪೌರಕಾರ್ಮಿಕರು ನಾಗರಿಕ ಸನ್ಮಾನವನ್ನು ಸ್ವೀಕರಿಸಿದರು.

ಸನ್ಮಾನದ ಬಳಿಕ ಮಾತನಾಡಿದ ಶಾಸಕರು, ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕಾದದ್ದು ಎಲ್ಲರ ಕರ್ತವ್ಯ ಎಂದರಲ್ಲದೆ ಅವರುಗಳ ಸೇವೆಯ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು. ಮಡಿಕೇರಿಯಲ್ಲಿ ಕಸವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು ವೈಜ್ಞಾನಿಕವಾಗಿ ಅದನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ತಾ. ೨೧ರ ದಸರಾ ಉತ್ಸವ ಬಳಿಕ ತಾ ೨೨ರಂದು ತಾನೇ ಖುದ್ದಾಗಿ ಬಂದು ದಸರಾ ಸಮಿತಿ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಗಾಂಧಿ ಮೈದಾನವನ್ನು ಸ್ವಚ್ಛ ಮಾಡಲಾಗುವುದು ಎಂದು ಮಂತರ್ ಹೇಳಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು ಕಾಫಿ ದಸರಾದಲ್ಲಿ ಕೊಡಗಿನ ಅನೇಕ ವೃತ್ತಿಪರ ಕಾಫಿ ಆಧಾರಿತ ತಯಾರಕರು ಪಾಲ್ಗೊಂಡಿದ್ದು ಕೊಡಗಿನ ಕಾಫಿಯ ಕಂಪನ್ನು ಇತರೆಡೆಗೆ ಹಬ್ಬಿಸಲು ಉತ್ತಮ ವೇದಿಕೆಯಾಗಿದೆ ಎಂದರು.

ತಾ.೧೪ ರಂದು (ಇಂದು) ಕಾಫಿ ದಸರಾ ಪ್ರಯುಕ್ತ ಸಂವಾದ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವರಿಗೆ ಸನ್ಮಾನ ಹೀಗೆ ಅನೇಕ ಕಾಫಿಪರ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತ, ಕಾಫಿ ದಸರಾ ಸಂಚಾಲಕ ಹೆಚ್ ಟಿ ಅನಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಇತರರು ಭಾಗವಹಿಸಿದ್ದರು.