ಸಿದ್ದಾಪುರ, ಅ. ೧೩: ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧಗಳನ್ನು ಅಕ್ರಮವಾಗಿ ದ್ವಿಚಕ್ರ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ವಲಯ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾ. ೧೨ರಂದು ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನು ಕೊಲ್ಲಿ ಶಾಖೆಯ ನಂಜರಾಯಪಟ್ಟಣದ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಸುಮಾರು ರೂ.೫ ಲಕ್ಷಕ್ಕೂ ಅಧಿಕ ಮೌಲ್ಯದ ಶ್ರೀಗಂಧಗಳನ್ನು ಸಾಗಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಶ್ರೀಗಂಧಗಳ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಕಂಬಿಬಾಣೆ ಗಿರಿಜನ ಕಾಲೋನಿಯ ನಿವಾಸಿಯಾಗಿರುವ ರಘು ಜಿ.ಆರ್. (೩೮) ಹಾಗೂ ಸುಂಟಿಕೊಪ್ಪದ ನಿವಾಸಿ ಸಂತೋಷ್ (೪೦) ಎಂಬವರನ್ನು ಮಾಲು ಸಮೇತ ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಬಲೆ ಬೀಸಿದೆ. ಸಿಸಿಎಫ್ ಸೋನಾಲ್ ವೃಷ್ಣಿ, ಡಿಸಿಎಫ್ ಅಭಿಷೇಕ್ ಮತ್ತು ಸೋಮವಾರಪೇಟೆ ತಾಲೂಕು ಎ.ಸಿ.ಎಫ್. ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್. ಆರ್. ನೇತೃತ್ವದಲ್ಲಿ ಮೀನು ಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್, ಗಸ್ತು ಅರಣ್ಯ ಪಾಲಕ ನಾಗರಾಜ್ ರಡಗಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ವಾಸು