ಶ್ರೀಮAಗಲ, ಅ. ೧೨: ಪೊನ್ನಂಪೇಟೆ ತಾಲೂಕಿನ ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹಡ್ಲು ಹಾಡಿ ಹಾಗೂ ಬೊಂಬುಕಾಡು ಹಾಡಿಯ ಸುಮಾರು ೧೮೫ ಕ್ಕೂ ಅಧಿಕ ಕುಟುಂಬಗಳಿಗೆ ರೂ ೪ ಕೋಟಿ ೮೪ ಲಕ್ಷ ವೆಚ್ಚದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದ್ದು ಈ ಸೌಲಭ್ಯದ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಸ್ವಾತಂತ್ರ‍್ಯ ಬಂದ ನಂತರ ಈ ಹಾಡಿಯ ಜನರು ಸುಮಾರು ೭ ದಶಕಗಳಿಂದ ನಿರಂತರವಾಗಿ ಕತ್ತಲೆಯಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದರು. ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಇವರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಬದ್ಧತೆಯನ್ನು ತೋರಿರಲಿಲ್ಲ. ಆದರೆ ತಾನು, ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ, ಇಂದು ಈ ಹಾಡಿಯಲ್ಲಿ ವಾಸಿಸುವ ಸಾವಿರಾರು ಜನ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಆತ್ಮ ತೃಪ್ತಿ ನನಗೆ ದೊರಕಿದೆ ಹಾಗೂ ಈ ಆತ್ಮ ತೃಪ್ತಿಯನ್ನು ನಾನು ಈ ನಿವಾಸಿಗಳ ಸಂತೋಷದಲ್ಲಿ ಕಾಣುತ್ತಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವಾಸಿಗಳಿಗೆ ಕಿವಿಮಾತು ಹೇಳಿದ ಶಾಸಕರು, ಈ ಸೌಲಭ್ಯದ ಸದುಪಯೋಗವನ್ನು ಜನರು ಪಡೆದುಕೊಂಡು ಜಾಗೃತವಾಗಿ ವಿದ್ಯುತ್ ಬಳಸುವುದರೊಂದಿಗೆ ತಮ್ಮ ಹಾಡಿಯ ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ಮುಖ ಮಾಡುವಂತೆ ಪ್ರೆರೇಪಿಸಬೇಕೆಂದು ಕರೆ ನೀಡಿದರು. ಸ್ಥಳೀಯ ನಿವಾಸಿಗಳು ಈ ಸಂದರ್ಭ ಶಾಸಕರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಅಧ್ಯಕ್ಷರಾದ ನವೀನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾನಂಡ ಪ್ರತ್ಯು, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪಂಕಜ, ಡಿಸಿಸಿ ಸದಸ್ಯರಾದ ವಿನಯ್ ಕುಮಾರ್, ಪಂಚಾಯಿತಿ ಸದಸ್ಯರಾದ ಅಫ್ರೋಜ್, ಚುಬ್ರು, ಪಕ್ಷದ ಮುಖಂಡರಾದ ರಾಮು, ಮಲ್ಲಪ್ಪ, ಪಿ.ಸಿ ರಾಮು, ಕುಂಡಚ್ಚಿರ ಮಂಜು ದೇವಯ್ಯ, ಮಧ್ಯಸ್ತ ಮಣಿ, ಪುಷ್ಪ, ಫಿಲೋಮೀನಾ, ನಿಕಿತಾ ಹಾಗೂ ಸ್ಥಳೀಯ ಹಾಡಿ ನಿವಾಸಿಗಳು ಉಪಸ್ಥಿತರಿದ್ದರು.