ಐಗೂರು, ಅ. ೧೨ : ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜು ಗ್ರಾಮಸ್ಥರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವುದರಿಂದ ಕಾಲೇಜಿನ ಶೈಕ್ಷಣಿಕ ಮಟ್ಟ ತೀರಾ ಕೆಳಮಟ್ಟಕ್ಕೆ ಇಳಿದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪೊನ್ನಪ್ಪ ಅಭಿಪ್ರಾಯಪಟ್ಟರು.
ಐಗೂರಿನ ಸರ್ಕಾರಿ ಪ.ಪೂ. ಕಾಲೇಜನ್ನು ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನೊಂದಿಗೆ ವಿಲೀನಗೊಳಿಸಿ ಕುಶಾಲನಗರಕ್ಕೆ ಸ್ಥಳಾಂತರಗೊಳಿಸುವ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಪತ್ರದ ಹಿನ್ನೆಲೆಯಲ್ಲಿ ಐಗೂರು ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಸಾಲಿನಲ್ಲಿ ಕಾಲೇಜಿನಲ್ಲಿ ಪ್ರಸ್ತುತ ಒಬ್ಬರು ಪ್ರಾಂಶುಪಾಲರು, ಐದು ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು ದ್ವಿತೀಯ ಪಿಯುಸಿಯಲ್ಲಿ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಮಾತ್ರ ಉತ್ತೀರ್ಣರಾಗಿರುವುದು ಸಮರ್ಪಕ ಫಲಿತಾಂಶವಲ್ಲ.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಆರ್ಟ್ಸ್ ಪಠ್ಯಕ್ರಮದ ಬದಲಿಗೆ ಕಾಮರ್ಸ್ ಪ್ರಾರಂಭಿಸಲಾಗುವುದು. ಪ್ರಥಮ ಪಿಯುಸಿಗೆ ೪೦ ವಿದ್ಯಾರ್ಥಿಗಳನ್ನು ದಾಖಲಿಸಲು ಗ್ರಾಮಸ್ಥರು ಹಾಗೂ ಕಾಲೇಜಿನವರು ಮುಂದಾದರೆ ಕಾಲೇಜನ್ನು ಉಳಿಸಲು ಸಾಧ್ಯವಿದೆ. ಒಬ್ಬ ವಿದ್ಯಾರ್ಥಿಗೆ ಸರ್ಕಾರದಿಂದ ಸುಮಾರು ಮೂರುವರೆ ಲಕ್ಷ ರೂ. ವೆಚ್ಚವಾಗುವುದರ ಜೊತೆಗೆ ಉಪನ್ಯಾಸಕರ ವೇತನ ಸೇರಿದಂತೆ ನಿರ್ವಹಣೆ ವೆಚ್ಚ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಸಂಸ್ಥೆ ನಡೆಸುವುದು ಕಷ್ಟದ ಕೆಲಸ ಎಂದರು.
ಮಡಿಕೇರಿ ಸರ್ಕಾರಿ ಪ. ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಮಾತನಾಡಿ, ಐಗೂರಿನ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ೨೧ ವಿದ್ಯಾರ್ಥಿಗಳ ಪೈಕಿ ಕೇವಲ ನಾಲ್ವರು ಮಾತ್ರ ಐಗೂರು ಪಿಯು ಕಾಲೇಜಿಗೆ ದಾಖಲಾಗಿದ್ದಾರೆ, ಉಳಿದ ೧೭ ಜನ ವಿದ್ಯಾರ್ಥಿಗಳಿಗೆ ಈ ಕಾಲೇಜು ಏಕೆ ಬೇಡವಾಯಿತು.? ಕಾಲೇಜು ಸ್ಥಳಾಂತರಕ್ಕೆ ಸಂಬAಧಿಸಿದAತೆ ಇಲಾಖೆಯಿಂದ ಪ್ರಸ್ತಾವನೆ ಕೇಳಲಾಗಿದೆ ಹೊರತು ಅಂತಿಮ ನಿರ್ಧಾರವಾಗಿಲ್ಲ ಎಂದರು.
ಕಾಲೇಜಿನ ಉಪಾಧ್ಯಕ್ಷ ಯೋಗೇಶ್, ಕೆ.ಪಿ. ದಿನೇಶ್, ಚೆನ್ನಕೇಶವ, ಹರಿದಾಸ್, ಲಿಂಗೇರಿ ರಾಜೇಶ್ ಮತ್ತು ಹೊನ್ನಪ್ಪ ಮಾತನಾಡಿ, ೧೯೯೬-೯೭ನೇ ಸಾಲಿನಲ್ಲಿ ಕಾಲೇಜು ಪ್ರಾರಂಭವಾಗಿದ್ದು, ಕಾಲೇಜಿನಲ್ಲಿ ಪಠ್ಯಕ್ರಮದಲ್ಲಿ ಕಲಾವಿಭಾಗ ಮಾತ್ರ ಇದ್ದ ಕಾರಣ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಕಾಮರ್ಸ್ನ ಪಠ್ಯಕ್ರಮಕ್ಕೆ ಬೇರೆ ಕಾಲೇಜಿಗೆ ದಾಖಲಾಗುತ್ತಿದ್ದು, ಕಾಮರ್ಸ್ ಕೋರ್ಸ್ ಆರಂಭಿಸಲು ಶಿಕ್ಷಣ ಇಲಾಖೆ ಹಾಗೂ ಶಾಸಕರಿಗೆ ಒತ್ತಾಯಿಸಲಾಗುವುದು. ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಒತ್ತಡ ತರಬೇಡಿ. ಮೂರು ವರ್ಷ ಅವಕಾಶ ನೀಡಿ ಎಂದರು. ಪ್ರಾಂಶುಪಾಲರಾದ ಉಮೇಶ್ ಕುಮಾರ್ ಮಾತನಾಡಿ, ಕಳೆದ ಸಾಲಿನ ನಾಲ್ಕು ಜನ ವಿದ್ಯಾರ್ಥಿಗಳ ಶುಲ್ಕವನ್ನು ತಾವೇ ಪಾವತಿಸಿರುವುದಾಗಿ ಸಭೆಗೆ ತಿಳಿಸಿದರು.
ಉಮೇಶ್ ಕುಮಾರ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಾಧ್ಯಕ್ಷ ಯೋಗೇಶ್, ಭರತ್ ಕುಮಾರ್, ಹರೀಶ್ ಅಯ್ಯಣ್ಣ, ಕೆಡಿಪಿ ಸದಸ್ಯೆ ಸಬಿತ ಚೆನ್ನಕೇಶವ, ಎಂ.ಎ. ಪ್ರಭಾಕರ, ಕೆ.ಪಿ. ದಿನೇಶ್, ಸಿಲ್ವರ್ಸ್ಟಾರ್ ಕ್ರಾಸ್ತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ರಾಜೇಶ್ ಮತ್ತು ಗ್ರಾಮಸ್ಥರು ಇದ್ದರು. - ಸುಕುಮಾರ್