ಐಗೂರು, ಅ. ೧೨: ಮಾದಾಪುರ ಲೀಡ್ ಬ್ಯಾಂಕ್, ಕೆನರಾ ಬ್ಯಾಂಕ್ ಮಾದಾಪುರ ಮತ್ತು ನಬಾರ್ಡ್ನ ಆರ್ಥಿಕ ನೆರವಿನೊಂದಿಗೆ ಅವಾರ್ಡ್ ಸಂಸ್ಥೆಯ ಸಹಯೋಗದೊಂದಿಗೆ ಮಾದಾಪುರದ ಜಂಬೂರು ಗ್ರಾಮದ ಟಾಟಾ ಕಾಫಿ ತೋಟದ ಕಾರ್ಮಿಕರಿಗೆ ಆರ್ಥಿಕ ಸಾಕ್ಷರತಾ ಆಂದೋಲನ ಆಯೋಜಿಸಲಾಗಿತ್ತು.

ಜಂಬೂರಿನ ಟಾಟಾ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಪ್ರಬೀನ ಖಾತೂನ್ ಎಂಬವರು ಕೆಲಸ ಮಾಡುತ್ತಿದ್ದ ಸಂದರ್ಭ ಮರಬಿದ್ದು ಮೃತಪಟ್ಟ ಹಿನ್ನೆಲೆ ಅವರ ಪತಿ ಅಜ್ಗರ್ ಅಲಿ ಅವರಿಗೆ ಪ್ರಧಾನಮಂತ್ರಿ ಸುರಕ್ಷಾ ಭೀಮ್ ಯೋಜನೆಯಡಿ ಮಾದಾಪುರದ ಕೆನರಾ ಬ್ಯಾಂಕ್ ವತಿಯಿಂದ ರೂ. ೨ ಲಕ್ಷ ಹಣದ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್ ಮಾತನಾಡಿ, ೧೮ ವರ್ಷದಿಂದ ೭೦ ವರ್ಷದೊಳಗೆ ಬ್ಯಾಂಕ್ ಖಾತೆ ಹೊಂದಿರುವ ಖಾತೆದಾರರು ವಾರ್ಷಿಕ ರೂ. ೨೦ ಪಾವತಿಸಿದರೆ ವ್ಯಕ್ತಿಗೆ ಅಪಘಾತ ಸಂಭವಿಸಿದಾಗ ಅಂಗವೈಕಲ್ಯ ಅಥವಾ ಮರಣ ಹೊಂದಿದರೆ ವ್ಯಕ್ತಿಯ ಕುಟುಂಬಕ್ಕೆ ರೂ. ೨ ಲಕ್ಷ ಹಣದ ವಿಮಾ ಯೋಜನೆಯನ್ನು ನೀಡಲಾಗುವುದು. ಅದೇ ರೀತಿ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆಯಲ್ಲಿ ೧೮ ರಿಂದ ೫೦ ವರ್ಷದ ಒಳಗೆ ಇರುವ ವ್ಯಕ್ತಿ ವಾರ್ಷಿಕ ರೂ. ೪೩೬ ಹಣ ಪಾವತಿಸಿದರೆ ವ್ಯಕ್ತಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ವ್ಯಕ್ತಿಯ ಕುಟುಂಬಕ್ಕೆ ರೂ. ೨ ಲಕ್ಷ ವಿಮಾ ಮೊತ್ತದ ಹಣ ದೊರಕಲಿದೆ ಎಂದ ಅವರು ಅಟಲ್ ಪಿಂಚಣಿ ಯೋಜನೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಟಾಟಾ ಕಾಫಿಯ ಹಿರಿಯ ವ್ಯವಸ್ಥಾಪಕ ರಾಕೇಶ್ ಕರುಂಬಯ್ಯ, ಕೆನರಾ ಬ್ಯಾಂಕಿನ ಪ್ರಾದೇಶಿಕ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್, ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಸಂತೋಷ್ ಕುಮಾರ್, ಮಾರ್ಕೆಟಿಂಗ್ ಮ್ಯಾನೇಜರ್ ಭರಣಿ, ವೆಲ್ಫೇರ್ ಅಧಿಕಾರಿ ವರ್ಷಿಣಿ, ಆರ್ಥಿಕ ಸಮಾಲೋಚಕರಾದ ಶ್ಯಾಮಲ, ಹರೀಶ್ ಸಿ.ಜಿ. ಮತ್ತು ಸಿಬ್ಬಂದಿಗಳು ಇದ್ದರು.