ವೀರಾಜಪೇಟೆ, ಅ. ೧೨: ಒಳ್ಳೆಯದು ಮತ್ತು ಕೆಟ್ಟದು ಎರಡೂ ನಮ್ಮೊಳಗೇ ಇವೆ. ನಿಜವಾದ ಕುರುಕ್ಷೇತ್ರ ಯುದ್ಧವು ಮನುಷ್ಯನ ಒಳಗಡೆಯೇ ನಡೆಯುತ್ತಿದೆ ಎಂದು ಯೋಗ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಹಿರಿಯ ಸನ್ಯಾಸಿ ಸ್ವಾಮಿ ಶುದ್ಧಾನಂದಾಜಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕಾವೇರಿ ಆಶ್ರಮದಲ್ಲಿ ಯೋಗ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ವತಿಯಿಂದ ನಡೆದ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ನಮ್ಮೊಳಗೆ ದೇವರ ಸಂಪರ್ಕದ ಶಾಂತಿಯನ್ನು ಅನುಭವಿಸಿದಾಗ, ಅದರ ಮುಂದೆ ಪ್ರಾಪಂಚಿಕ ಸುಖಗಳು ಗಾಜಿನ ಚೂರುಗಳಂತೆ ಕಾಣಿಸುತ್ತವೆ. ಜೀವನ ಯಶಸ್ವಿಯಾಗಬೇಕಾದರೆ ನಮ್ಮಲ್ಲಿನ ಸತ್ಯದ ಶಕ್ತಿಗಳು ಜಯಗಳಿಸಬೇಕು. ವೈರಾಗ್ಯ ಎಂದರೆ ಹಿಮಾಲಯಕ್ಕೆ ಓಡಿಹೋಗುವುದಲ್ಲ; ನಮ್ಮೊಳಗಿನ ದುರ್ಗುಣಗಳನ್ನು ಮತ್ತು ನಿಷ್ಪçಯೋಜಕ ಕೆಟ್ಟ ಅಭ್ಯಾಸಗಳನ್ನು ತೊರೆಯುವ ಸಾಮರ್ಥ್ಯವೇ ನಿಜವಾದ ವೈರಾಗ್ಯ ಎಂದರು.
ಮೊದಲಿಗೆ ಧ್ಯಾನವು ಸ್ವಲ್ಪ ಕಷ್ಟಕರ ಎನಿಸಬಹುದು. ಆದರೆ ನಂತರದಲ್ಲಿ ಅದು ಸುಲಭವಾಗುತ್ತದೆ. ಮನಸ್ಸಿನ ಚಂಚಲತೆಯನ್ನು ತಡೆದು, ಮನಸ್ಸಿನಲ್ಲಿ ಶಾಂತಿ ಮತ್ತು ಮೌನವನ್ನು ನೆಲೆಗೊಳಿಸಬೇಕು. ಆ ಆಳವಾದ ಆಂತರಿಕ ಮೌನದಲ್ಲಿ ಮಾತ್ರ ನಾವು ಒಳಗಿರುವ ದೇವರನ್ನು ಕಾಣಲು ಸಾಧ್ಯ. ಇದೇ ನಿಜವಾದ ಧ್ಯಾನ. ಕ್ರಿಯಾಯೋಗವು ಪ್ರಾಚೀನ ಋಷಿಮುನಿಗಳಿಂದ ಬಂದಿದ್ದಾಗಿದೆ. ಇದು ಭಾರತದ ಪ್ರಾಚೀನ ಯೋಗ ವಿಜ್ಞಾನದ ಜ್ಞಾನವಾಗಿದೆ. ಭಗವಾನ್ ಕೃಷ್ಣ, ಯೇಸು ಕ್ರಿಸ್ತ, ಮಹಾವತಾರ ಬಾಬಾಜಿ, ಲಾಹಿರೀ ಮಹಾಶಯರು, ಸ್ವಾಮಿ ಯುಕ್ತೇಶ್ವರಜಿ ಮತ್ತು ಕೊನೆಯದಾಗಿ ಪರಮಹಂಸ ಯೋಗಾನಂದರ ಮೂಲಕ ಇಂದು ಜಗತ್ತಿಗೆ ಈ ಜ್ಞಾನವು ಲಭಿಸಿದೆ ಎಂದರು.
ವೇದಿಕೆಯಲ್ಲಿ ಗಣೇಶ್ ಬಾಬು, ಸಂಸ್ಥೆಯ ಸನ್ಯಾಸಿಗಳಾದ ಸ್ವಾಮಿ ಶ್ರೇಯಾನಂದಜಿ ಮತ್ತು ಸ್ವಾಮಿ ರಾಘವಾನಂದಜಿ ಅವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ, ಸ್ವಾಮಿ ಶ್ರೇಯಾನಂದಜಿ ಮತ್ತು ಸ್ವಾಮಿ ರಾಘವಾನಂದಜಿಯವರು ಕ್ರಿಯಾ ಮಂತ್ರ ಮತ್ತು ಮೂಲಭೂತ ತಂತ್ರಗಳನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ಸಾಕಷ್ಟು ಆಸಕ್ತರು ಭಾಗವಹಿಸಿದ್ದರು.