*ಗೋಣಿಕೊಪ್ಪ, ಅ. ೧೨: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರ ದೇವಯ್ಯ ಅವರ ಕಾಫಿ ತೋಟಕ್ಕೆ ನೆದರ್ಲ್ಯಾಂಡ್ಸ್ ರಾಯಭಾರ ಕಚೇರಿಯ ತಂಡ ಭೇಟಿ ನೀಡಿ, ಸುಸ್ಥಿರ ಹಾಗೂ ಪುನಶ್ಚೇತನ ಕಾಫಿ ಕೃಷಿ ಪದ್ಧತಿಗಳ ಕುರಿತು ಕ್ಷೇತ್ರಮಟ್ಟದಲ್ಲಿ ಮಾಹಿತಿ ಪಡೆದುಕೊಂಡಿತು.
ಹ್ಯಾAಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯು ಅನುಷ್ಠಾನಗೊಳಿಸುತ್ತಿರುವ ಐಸಿಸಿಆರ್ಎಲ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಿವಿಧ ಚಟುವಟಿಕೆಗಳನ್ನು ತಂಡ ಪರಿಶೀಲಿಸಿತು. ಕಾಫಿ ಕೃಷಿಯಲ್ಲಿ ಪರಿಸರ ಸಂರಕ್ಷಣೆ, ಮಣ್ಣಿನ ಆರೋಗ್ಯ ಕಾಪಾಡುವುದು ಹಾಗೂ ಉತ್ಪಾದಕತೆಯನ್ನು ಸುಸ್ಥಿರವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಅನುಸರಿಸಲಾಗುತ್ತಿರುವ ಪದ್ಧತಿಗಳ ಕುರಿತು ತಂಡ ಮಾಹಿತಿ ಪಡೆದುಕೊಂಡಿತು.
ಭೇಟಿಯ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ತಂಡ, ಕಾಫಿ ಬೆಳೆಯ ವಿವಿಧ ಹಂತಗಳಲ್ಲಿ ಸಮಯೋಚಿತ ತಾಂತ್ರಿಕ ಸಲಹೆ ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುವ ಮಹತ್ವದ ಕುರಿತು ಚರ್ಚಿಸಿತು. ಹವಾಮಾನ ಬದಲಾವಣೆ ಹಾಗೂ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಹಿನ್ನೆಲೆಯಲ್ಲಿ ಕಾಫಿ ಕೃಷಿಯಲ್ಲಿ ಪುನಶ್ಚೇತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯದ ಬಗ್ಗೆಯೂ ಚರ್ಚೆ ನಡೆಯಿತು.
ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ವಿವಿಧ ಹಸ್ತಕ್ಷೇಪಗಳು, ಜೀವವೈವಿಧ್ಯ ಸಂರಕ್ಷಣೆ, ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಸುಸ್ಥಿರ ಕಾಫಿ ಉತ್ಪಾದನೆಗೆ ನೀಡುತ್ತಿರುವ ಕೊಡುಗೆಯ ಕುರಿತು ತಂಡವು ಮಾಹಿತಿ ಪಡೆದುಕೊಂಡಿತು. ರೈತರ ಅನುಭವಗಳು ಮತ್ತು ಕ್ಷೇತ್ರಮಟ್ಟದಲ್ಲಿ ಅನುಸರಿಸುತ್ತಿರುವ ಕೃಷಿ ಪದ್ಧತಿಗಳ ಬಗ್ಗೆಯೂ ತಂಡ ಚರ್ಚೆ ನಡೆಸಿತು.