ಮಡಿಕೇರಿ, ಅ. ೧೨: ರಾಜಕೀಯ ಹಾಗೂ ಅನೇಕ ಜನಪರ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿರುವ ಟಿಪಿ ರಮೇಶ್ ಅವರ ೭೫ನೇ ಹುಟ್ಟುಹಬ್ಬವನ್ನು ತಾ ೧೧ರಂದು ಆಚರಿಸಲಾಯಿತು.

ಮಡಿಕೇರಿಯ ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜನಪ್ರತಿನಿಧಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕರು ರಮೇಶ ಅವರ ರಾಜಕೀಯ ಏಳು ಬೀಳು, ಸಾಹಿತ್ಯ ಪರ ಚಟುವಟಿಕೆಗಳಲ್ಲಿ ಅವರ ಸಾಧನೆ, ಸಂಘಟನೆಗಳಲ್ಲಿ ಅವರು ತೋರಿರುವ ಚತುರತೆ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆಎಸ್ ಪೊನ್ನಣ್ಣ ಅವರು ಮಾತನಾಡಿ, ರಮೇಶ್ ಅವರು ಹಿರಿಯರಾಗಿ ಪಕ್ಷ ಮುನ್ನಡೆಸುವ ಬಗ್ಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಕುರಿತು ಹಾಗೂ ಅನೇಕ ಕಾರ್ಯಕ್ರಮಗಳ ಕುರಿತು ಹಿರಿಯರಾಗಿ ರಮೇಶ ಅವರು ನೀಡುವ ಸಲಹೆ ತಮಗೆ ಅನೇಕ ಸಂದರ್ಭದಲ್ಲಿ ನೆರವಿಗೆ ಬಂದಿದೆ ಎಂದು ಸ್ಮರಿಸಿದರು.

ಸಾಹಿತಿ ಬಿ.ಎ. ಷಂಶುದ್ದೀನ್ ಅವರು ಮಾತನಾಡಿ, ಬಾಲ್ಯದಿಂದಲೇ ಹೋರಾಟದ ಕಿಚ್ಚನ್ನು ಹೊಂದಿದ್ದ ರಮೇಶ ಅವರು ಅನೇಕ ಹೋರಾಟಗಳಲ್ಲಿ ಸಮಾಜಕ್ಕೆ ನ್ಯಾಯವನ್ನು ಒದಗಿಸಿದ್ದಾರೆ ಎಂದರು. ಪತ್ರಕರ್ತನಾಗಿ, ಉತ್ತಮ ಸಂಘಟನಾಗಿ, ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷನಾಗಿ ಅನೇಕ ವರ್ಷಗಳ ಕಾಲ ಜಿಲ್ಲೆಯಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡುವಲ್ಲಿ ರಮೇಶ ಅವರ ಪಾತ್ರ ಹಿರಿದಾಗಿದೆ ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಅವರು ಮಾತನಾಡಿ ೨೦೧೨ರಲ್ಲಿ ರಮೇಶ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚು ಮೂಡಿಸಿದೆ, ಜಿಲ್ಲೆಯ ಇತಿಹಾಸದಲ್ಲಿ ಅದೊಂದು ಅಭೂತಪೂರ್ವ ದಾಖಲೆಯಾಗಿ ನಿಂತಿರುವ ಸಮಾರಂಭದ ಯಶಸ್ಸು ರಮೇಶ್ ಅವರಿಗೆ ಸೇರಿದೆ ಎಂದರು. ರಾಜಕೀಯವಾಗಿ ಅವರು ತಲುಪಬೇಕಾದ ಹಂತವನ್ನು ಏರಲು ಸಾಧ್ಯವಾಗದಿದ್ದರೂ ರಾಜ್ಯ ಸರ್ಕಾರದ ಅಂಗಸAಸ್ಥೆಗಳಲ್ಲಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭ ಸಾಕಷ್ಟು ಆರ್ಥಿಕ ಅನುಕೂಲ ಮಾಡಲು ಅವಕಾಶವಿದ್ದರೂ ಕೂಡ ಅವರು ಹಣದ ಬದಲು ಜನವನ್ನು ಸಂಪಾದಿಸಿದ್ದಾರೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್ ಅವರು ಮಾತನಾಡಿ, ರಮೇಶ ಅವರ ಬದುಕಿನ ಮಜಲುಗಳನ್ನು ಮೆಲುಕು ಹಾಕಿದರು. ಹಿರಿಯ ಸಹಕಾರಿ ಬಿಎ ಗಣಪತಿ ಅವರು ಮಾತನಾಡಿ, ರಮೇಶ್ ಅವರು ಯಾವುದೇ ಒಂದು ಸಾರ್ವಜನಿಕ ಕೆಲಸಗಳನ್ನು ಕೈಗೆತ್ತಿಕೊಂಡರೆ ತ್ರಿವಿಕ್ರಮನಂತೆ ಅದರ ಹಿಂದೆ ಬಿದ್ದು ಸಾಧಿಸುವ ಛಲ ಮತ್ತು ಮನೋಭಾವವನ್ನು ಹೊಂದಿದ್ದಾರೆ ಎಂದು ಪ್ರಶಂಶಿಸಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂಪಿ ಮುತ್ತಪ್ಪ ಅವರು ಮಾತನಾಡಿ, ಗೋಕಾಕ್ ಚಳುವಳಿ ಸಂದರ್ಭ ರಮೇಶ ಅವರನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದು ಪೊಲೀಸರಿಗೆ ತಿಳಿದು ಮನೆಗೆ ಆಗಮಿಸಿ ತನ್ನನ್ನು ಬಂಧಿಸಿದರಾದರೂ, ರಮೇಶ ಅವರು ಪೊಲೀಸರಿಗೆ ಸಿಗಲಿಲ್ಲ, ಎಲ್ಲ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜಿಲ್ಲೆಯಲ್ಲಿ ಅನೇಕರಿಗೆ ರಮೇಶ್ ಅವರು ಮಾರ್ಗದರ್ಶಕರಾಗಿದ್ದಾರೆ ಎಂದರು.

ತನ್ನ ಎಪತ್ತೆöÊದು ವರ್ಷಗಳ ಸುದೀರ್ಘ ಸಾರ್ವಜನಿಕ ಬದುಕಿನ ಬಗ್ಗೆ ಹಿತೈಷಿಗಳೊಂದಿಗೆ ಮಾತು ಹಂಚಿಕೊAಡ ರಮೇಶ್, ಅಂಗನವಾಡಿ, ಅಹಿಂದ, ಚೇಂಬರ್, ಕಾ ಸಾ ಪ, ಕಾರ್ಮಿಕ ಸಂಘಟನೆ, ಧಾರ್ಮಿಕ ಸಂಘಟನೆಗಳೂ ಸೇರಿದಂತೆ ಜನಪರ ಕೆಲಸಗಳಲ್ಲಿ ತಾನು ತೊಡಗಿಸಿಕೊಂಡ ಸಂದರ್ಭ ಅನೇಕ ವಿರೋಧಗಳು ಬಂದರೂ ಅವುಗಳಲ್ಲಿ ಯಶಸ್ಸನ್ನು ಕಂಡ ಬಳಿಕ ವಿರೋಧಿಗಳೇ ತನ್ನ ನಿಲುವನ್ನು ಒಪ್ಪಿ ಶ್ಲಾಘಿಸಿದ ಬಗ್ಗೆ ವಿವರಿಸಿದರು. ಪತ್ರಿಕೆ ಹಂಚುತ್ತಿದ್ದ ಹುಡುಗನಾಗಿ ನಂತರ ಪತ್ರಿಕೆ ಒಂದನ್ನು ತಾನೇ ಹೊರ ತರುವ ಮಟ್ಟಕ್ಕೆ ಬೆಳೆದ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಂಡರು. ಒಬ್ಬ ಮೆಕಾನಿಕ್ ಆಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಬಳಿಕ ಒಂದು ಹಂತದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷನವರಿಗೆ ತಲುಪಿದ್ದು ತನ್ನ ಸೌಭಾಗ್ಯ ಎಂದು ನೆನಪಿಸಿಕೊಂಡರು

ರೇವತಿ ರಮೇಶ್ ಅವರು ಕಾರ್ಯಕ್ರಮ ನಿರೂಪಿಸಿ, ತುಳಸಿ ಮೋಹನ್ ಪರಿಚಯಿಸಿ, ಸಂಧ್ಯಾ ನವೀನ್ ಅವರು ಪ್ರಾರ್ಥನೆ ಮತ್ತು ವಂದನಾರ್ಪಣೆ ಮಾಡಿದರು ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ್ದ ಮಾಜಿ ಸಚಿವ ಎಂ ಸಿ ನಾಣಯ್ಯ ಅವರು ರಮೇಶ್ ಅವರಿಗೆ ಶುಭ ಹಾರೈಸಿದರೆ ರಮೇಶ ಅವರು ಹಿರಿಯರಿಗೆ ಗೌರವ ಸಮರ್ಪಿಸಿದರು. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.